×
Ad

ಕೇರಳದಲ್ಲಿ ಬಂಧಿತರಾದವರಿಗೂ ಕೊಡಗು ಜಿಲ್ಲೆಗೂ ನಂಟಿಲ್ಲ: ಡಿವೈಎಸ್ಪಿ ಸದಾನಂದನ್

Update: 2017-10-30 23:31 IST

ಸಿದ್ದಾಪುರ, ಅ.30: ಕೊಡಗು ಜಿಲ್ಲೆ ಯಲ್ಲೂ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಕಾರ್ಯಾಚರಿಸುತ್ತಿರುವ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಸುದ್ದಿ ಶುದ್ಧಸುಳ್ಳು ಎಂದು ಕೇರಳದ ಕಣ್ಣೂರು ಜಿಲ್ಲೆಯ ಡಿವೈಎಸ್ಪಿ ಸದಾನಂದನ್ ಸ್ಪಷ್ಟಪಡಿಸಿದ್ದಾರೆ.

ಐಸಿಸ್‌ಗೆ ಯುವಕರನ್ನು ಸೇರಿಸುತ್ತಿದ್ದಾರೆ ಎಂಬ ಆರೋಪದಡಿಯಲ್ಲಿ ಕೇರಳದಲ್ಲಿ ಬಂಧಿತರಾದವರು ಕೊಡಗು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದಾರೆ ಎಂಬುವುದಾಗಿ ತಾನು ಮಾಹಿತಿ ನೀಡಿದ್ದಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಇಂತಹ ಊಹಾಪೋಹದ ಸುದ್ದಿಗಳನ್ನು ಬಿತ್ತರಿಸಿ ಜನರಲ್ಲಿ ಆತಂಕ ಮೂಡಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಉಗ್ರಗಾಮಿ ಸಂಘಟನೆಗೆ ಯುವಕರನ್ನು ಸೇರಿಸುತ್ತಿದ್ದಾರೆ ಎಂಬ ಆರೋಪದಡಿ ಕೇರಳದ ಕಣ್ಣೂರು ಜಿಲ್ಲೆಯ ಕೂಡಾಳಿ ನಿವಾಸಿ ಹಂಝ(67) ಮತ್ತು ಮನಾಫ್ ರೆಹಮಾನ್ (44) ಅವರನ್ನು ತಲಶೇರಿಯಲ್ಲಿ ಬಂಧಿಸಲಾಗಿತ್ತು. ಕಣ್ಣೂರು ಜಿಲ್ಲೆಯ ಡಿವೈಎಸ್ಪಿ ಸದಾನಂದನ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡ ತಂಡ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೇರಳದ ವಿವಿಧೆಡೆಯಿಂದ ಯುವಕರನ್ನು ಸಂಘಟನೆಗೆ ಕರೆತರಲು ಕಾರ್ಯಚಟುವಟಿಕೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ಕೊಡಗು ಜಿಲ್ಲೆಗೆ ಸಂಬಂಧ ಕಲ್ಪಿಸಿ ಮಾಡಿರುವ ಸುದ್ದಿ ನಿಜಕ್ಕೂ ಆಶ್ಚರ್ಯ ತಂದಿದೆ ಎಂದರು.

ಅಡುಗೆ ಕೆಲಸ ಮಾಡುತ್ತಿದ್ದ ಹಂಝ ನಕಲಿ ಪಾಸ್‌ಪೋರ್ಟ್ ಬಳಸಿ ಆರು ತಿಂಗಳ ಹಿಂದೆ ಮಂಗಳೂರಿನಿಂದ ಸಿರಿಯಾ ದೇಶಕ್ಕೆ ಪ್ರಯಾಣ ಬೆಳೆಸಲು ಮುಂದಾದಾಗ ಎನ್‌ಐಎ ಪೊಲೀಸರು ಆತನನ್ನು ಬಂಧಿಸಿ ಬಿಡುಗಡೆಗೊಳಿಸಿದ್ದರು. ಇದಾದ ಬಳಿಕ ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ತಲಶೇರಿಯಲ್ಲಿ ಬಂಧಿಸಿದಾಗ ಸ್ಫೋಟಕ ಮಾಹಿತಿಯೊಂದನ್ನು ಬಾಯಿ ಬಿಟ್ಟಿದ್ದಾನೆ. ಇವರೊಂದಿಗೆ ಕೇರಳದ ಕಣ್ಣೂರು ಜಿಲ್ಲೆಯ ಮುಂಡೇರಿ ಗ್ರಾಮದ ಮಿಥಿಲಾಝ್, ಮಯ್ಯಿಲ್ ನಿವಾಸಿ ಅಬ್ದುಲ್ ರಝಾಕ್, ಪಡನೋಟ್ ಮೊಟ್ಟ ನಿವಾಸಿ ರಶೀದ್ ಎಂಬವರನ್ನು ಬಂಧಿಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.

ಕೇರಳದಲ್ಲಿ ಐಸಿಸ್ ಶಂಕಿತ ಐವರನ್ನು ಬಂಧಿಸಲಾಗಿದೆ. ಅವರಿಗೆ ಕೊಡಗು ಜಿಲ್ಲೆಯಲ್ಲೂ ನಂಟು ಇರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ ಎನ್ನುವುದು ಮಾಧ್ಯಮದ ಮೂಲಕ ತಿಳಿಯಿತು. ಆದರೆ ಪೊಲೀಸರು ಅಧಿಕೃತವಾಗಿ ಇದರ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಜಿಲ್ಲೆಯಲ್ಲಿ ಅಂತಹ ಚಟುವಟಿಕೆಗಳು ಎಲ್ಲಿಯೂ ಕಂಡು ಬಂದಿಲ್ಲ.
-ರಾಜೇಂದ್ರ ಪ್ರಸಾದ್, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News