×
Ad

​ಕುಸುಮಾ ಶಾನ್‌ ಬಾಗ್‌ಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

Update: 2017-10-30 23:33 IST

ಮಡಿಕೇರಿ, ಅ.30: ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಈ ಬಾರಿ ಕೊಡಗಿನ ಹಿರಿಯ ಪತ್ರಕರ್ತೆ ಕುಸುಮಾ ಶಾನ್‌ಬಾಗ್ (69) ರಾಜ್ಯ ಸರಕಾರದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಹಿರಿಯ ಸಾಹಿತಿಯಾಗಿರುವ ಕುಸುಮಾ ಪ್ರಜಾವಾಣಿ ಪತ್ರಿಕೆಯಲ್ಲಿ 21 ವರ್ಷಗಳ ಕಾಲ ಕಾರ್ಯನಿರ್ವಹಣೆ ಮಾಡಿ ಇದೀಗ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ವರದಿಗಾರ್ತಿಯಾಗಿದ್ದ ಸಂದರ್ಭ ರಾಜೀವ್ ಗಾಂಧಿ ಹಂತಕ ಶಿವರಸನ್ ತಂಡ ಮಂಡ್ಯದ ಪುತ್ತತ್ತಿ ಗ್ರಾಮದಲ್ಲಿ ಠಿಕಾಣಿ ಹೂಡಿರುವ ಸುದ್ದಿಯನ್ನು ಕುಸುಮಾ ಪ್ರಥಮ ಬಾರಿಗೆ ಬೆಳಕಿಗೆ ತಂದರು.

ವಿಮೋಚನಾ ಎಂಬ ಮಹಿಳಾ ಪರ ಸ್ವಯಂ ಸೇವಾ ಸಂಘಟನೆಯಲ್ಲೂ ಕಾರ್ಯನಿರ್ವಹಿಸಿರುವ ಕುಸುಮಾ ಬೆಂಗಳೂರಿನ ಬೀದಿ ಬದಿಯ ವೇಶ್ಯೆಯರ ಸಮಸ್ಯೆಗಳ ಬಗ್ಗೆ ಸುದೀರ್ಘ ವರ್ಷ ಅಧ್ಯಯನ ನಡೆಸಿ ಕಾಯಕ ಕಾರ್ಪಣ್ಯ ಕೃತಿ ಪ್ರಕಟಿಸಿದ್ದಾರೆ. ‘‘ನೆನಪುಗಳ ಬೆನ್ನೇರಿ’’ ಸಣ್ಣ ಕಥೆಗಳ ಸಂಕಲನ, ‘‘ಮಣ್ಣಿನಿಂದ ಎದ್ದವರು’’ ಕಾದಂಬರಿಯನ್ನೂ ಬರೆದಿದ್ದಾರೆ.

ಉದಯವಾಣಿ ಪತ್ರಿಕೆಯಲ್ಲಿ ಪುಟಗಳ ನಡುವಿನ ನವಿಲು ಗರಿ ಅಂಕಣವನ್ನು ಬರೆಯುತ್ತಿದ್ದರು. ರಾಜ್ಯದ ಹೆಸರಾಂತ ಸಾಹಿತಿ ಹಾಗೂ ಕಾದಂಬರಿಕಾರ ಭಾರತೀಸುತ ಅವರ ಪುತ್ರಿಯಾಗಿರುವ ಕುಸುಮಾ ಅವಿವಾಹಿತೆಯಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮೂಲತ: ಇವರು ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News