×
Ad

ಬೈಕ್ ಸವಾರನಿಗೆ ಹಲ್ಲೆ ಆರೋಪ: ಪೊಲೀಸ್-ನಾಗರಿಕರ ಮಾತಿನ ಚಕಮಕಿ

Update: 2017-10-30 23:57 IST

ಶಿವಮೊಗ್ಗ, ಅ.30: ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ರವಿವಾರ ಸಂಜೆ ಸಾರ್ವಜನಿಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ರಸ್ತೆ ತಡೆ ನಡೆಸಲು ಮುಂದಾಗ ಘಟನೆ ನಡೆಯಿತು.

ಈ ವೇಳೆ ಸ್ಥಳದಲ್ಲಿ ಕೆಲ ಸಮಯ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು. ನೂರಾರು ಜನ ಜಮಾಯಿಸಿದ್ದರಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳಕ್ಕಾಗಮಿಸಿದ ಹೆಚ್ಚಿನ ಸಂಖ್ಯೆಯ ಪೊಲೀಸರು ಉದ್ರಿಕ್ತ ಸಾರ್ವಜನಿಕರನ್ನು ಸಮಾಧಾನಗೊಳಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

ಏನಾಯ್ತು?: ಎ.ಎ. ವೃತ್ತದಲ್ಲಿ ಬೈಕ್ ಸವಾರನೋರ್ವ ತನ್ನ ತಾಯಿ, ಸಹೋದರಿ ಕುಳ್ಳಿರಿಸಿಕೊಂಡು ತೆರಳುತ್ತಿದ್ದ ವೇಳೆ ಸಂಚಾರಿ ಪೊಲೀಸ್ ಪೇದೆಯೋರ್ವರು ಬೈಕ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ನಡುವೆ ಬೈಕ್ ಮುಂದಕ್ಕೆ ಚಲಿಸಿದ್ದು, ಅಲ್ಲಿಯೇ ಇದ್ದ ಹೋಂಗಾರ್ಡ್‌ವೊಬ್ಬರು ಬೈಕ್‌ನ ಮುಂದಿನ ಬ್ರೇಕ್ ಹಿಡಿದಿದ್ದಾರೆ ಎನ್ನಲಾಗಿದೆ. ಇದರಿಂದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಹಿಂಬದಿ ಕುಳಿತಿದ್ದ ಮಹಿಳೆ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಸವಾರನು ಪೊಲೀಸರೊಂದಿಗೆ ಮಾತಿನ ಚಕಮಕಿಗಿಳಿದಿದ್ದು, ಪೇದೆಯು ಸವಾರನ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.

ಆಕ್ಷೇಪ: ಈ ವೇಳೆ ಸ್ಥಳದಲ್ಲಿ ನಾಗರಿಕರು ಜಮಾಯಿಸಿ ಬೈಕ್ ಸವಾರನ ಪರ ಪೊಲೀಸರ ಜೊತೆ ವಾಕ್ಸಮರ ನಡೆಸಲಾರಂಭಿಸಿದ್ದಾರೆ. ಕಾನೂನು ರೀತ್ಯ ದಂಡ ಹಾಕುವುದು ಬಿಟ್ಟು, ಹಲ್ಲೆ ನಡೆಸಿದ್ದೇಕೆ ಎಂದು ಸ್ಥಳದಲ್ಲಿದ್ದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಹಿರಿಯ ನಾಗರಿಕ ಅನ್ವರ್ ಎಂಬವರು ಪೊಲೀಸರ ಕ್ರಮಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಷ್ಟರಲ್ಲಿಯೇ ಸ್ಥಳಕ್ಕಾಗಮಿಸಿದ ಇನ್ನಷ್ಟು ಪೊಲೀಸರು ನಾಗರಿಕರನ್ನು ಸ್ಥಳದಿಂದ ಚದುರಿಸಿದ್ದಾರೆ. ಇದೇ ವೇಳೆ ಅನ್ವರ್ ಅವರನ್ನು ದೊಡ್ಡಪೇಟೆ ಠಾಣೆಗೆ ಕರೆತಂದಿದ್ದಾರೆ. ಇದಕ್ಕೆ ಸ್ಥಳದಲ್ಲಿದ್ದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಪ್ಪುಮಾಡಿದ ಪೊಲೀಸ್ ಪೇದೆಯ ವಿರುದ್ಧ ಕ್ರಮಕೈಗೊಳ್ಳುವುದು ಬಿಟ್ಟು, ಯಾವುದೇ ತಪ್ಪುಮಾಡದ ಅನ್ವರ್‌ರನ್ನು ಠಾಣೆಗೆ ಕರೆದೊಯ್ದಿದ್ದು ಏಕೆ ಎಂದು ಪ್ರಶ್ನಿಸಲಾರಂಭಿಸಿದ್ದಾರೆ. ಜೊತೆಗೆ ಠಾಣೆಯ ಆವರಣದಲ್ಲಿ ನೂರಾರು ಜನ ಜಮಾಯಿಸಿದ್ದಾರೆ.

ಅಂತಿಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು, ಠಾಣೆಯಲ್ಲಿಯೇ ನಾಗರಿಕ ರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅನ್ವರ್ ಅವರನ್ನು ಬಿಟ್ಟು ಕಳುಹಿಸಿದ್ದಾರೆ.

ಇಡೀ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಪೊಲೀಸ್ ಅಧಿಕಾರಿಗಳು ಘಟನೆಯ ಬಗ್ಗೆ ಕೂಲಂಕಷ ಮಾಹಿತಿ ಪಡೆದು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News