ಘನತೆ ಹೆಚ್ಚಿಸಿಕೊಂಡ ರಾಜ್ಯೋತ್ಸವ ಪ್ರಶಸ್ತಿ

Update: 2017-10-31 05:44 GMT

ಒಂದು ಕಾಲವಿತ್ತು, ರಾಜ್ಯೋತ್ಸವ ದಿನ ಹತ್ತಿರ ಬರುತ್ತಿದ್ದಂತೆಯೇ ನಾಡಿನ ಸಾಧಕರು ತಲೆಮರೆಸಿಕೊಳ್ಳುತ್ತಿದ್ದರು. ಕಾರಣ ಇಷ್ಟೇ. ರಾಜ್ಯೋತ್ಸವ ದಿನದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಘೋಷಿಸುವ ಪಟ್ಟಿಯಲ್ಲಿ ಎಲ್ಲಿ ತನ್ನ ಹೆಸರು ಪ್ರಕಟವಾಗಿ ಬಿಡುತ್ತದೆಯೋ ಎನ್ನುವ ಭಯ ಅವರದಾಗಿತ್ತು. ರಾಜಕೀಯ ಹಸ್ತಕ್ಷೇಪದಿಂದ ಪ್ರಶಸ್ತಿ ತನ್ನ ಘನತೆಯನ್ನು ಸಂಪೂರ್ಣ ಕಳೆದುಕೊಂಡಿದ್ದುದೇ ಇದಕ್ಕೆ ಕಾರಣವಾಗಿತ್ತು. ಹೆಸರಿಗಷ್ಟೇ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಿರುತ್ತಿತ್ತು. ಅವರು ಆಯ್ಕೆ ಮಾಡಿದ ಯಾವ ಹೆಸರುಗಳೂ ಅಂತಿಮಗೊಳ್ಳುತ್ತಿರಲಿಲ್ಲ. ವಿವಿಧ ಸಚಿವರು, ಮುಖ್ಯಮಂತ್ರಿ ಅಂತಿಮಗೊಳಿಸಿದ ಹೆಸರುಗಳು ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಕೆಲವೊಮ್ಮೆ ಎರಡೆರಡು ಕಂತುಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಬೇಕಾದಂತಹ ಅನಿವಾರ್ಯತೆಯನ್ನು ಸರಕಾರ ಎದುರಿಸಬೇಕಾಗಿತ್ತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಲ್ಲಿದ್ದಾಗ ಇದು ನಡೆಯಿತು.

140ರಷ್ಟು ಮಂದಿಗೆ ಈ ಪ್ರಶಸ್ತಿಯನ್ನು ಘೋಷಿಸಿದ ಉದಾಹರಣೆಗಳಿವೆ. ನಿಜಕ್ಕೂ ಸಾಧಕರನ್ನೇ ಗುರುತಿಸಿ ಈ ಪ್ರಶಸ್ತಿಯನ್ನು ಕೊಟ್ಟಿದ್ದಿದ್ದರೆ ಅದು ಚರ್ಚೆಗೊಳಗಾಗುತ್ತಿರಲಿಲ್ಲ. ಆದರೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜಕೀಯ ನಾಯಕರು ಒಂದು ದೊಡ್ಡ ಅಣಕವಾಗಿಸಿದ್ದರು. ತಮ್ಮ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ, ಕಾರ್ಯಕರ್ತರಿಗೆ ಈ ಪ್ರಶಸ್ತಿಯನ್ನು ಹಂಚಿದ ಉದಾಹರಣೆಗಳೂ ಇದ್ದವು. ಹೆಸರಿಗೆ ನಾಲ್ಕೈದು ಹಿರಿಯ ಸಾಧಕರನ್ನು ಆಯ್ಕೆಮಾಡಿ ಉಳಿದಂತೆ, ವಶೀಲಿ-ವಸೂಲಿ ಎರಡೂ ಈ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಕೆಲಸ ಮಾಡುತ್ತಿದ್ದವು. ವಿಶೇಷವೆಂದರೆ, ರಾಜ್ಯೋತ್ಸವ ಪ್ರಶಸ್ತಿ ಕೊಡಿಸುವ ಬ್ರೋಕರ್‌ಗಳೇ ಹುಟ್ಟಿಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಕನ್ನಡದ ನಿಜವಾದ ಸಾಧಕರು ಅಯೋಗ್ಯರ ನಡುವೆ ಗುರುತಿಸಿಕೊಳ್ಳಬೇಕಾಗಿತ್ತು. ಅವರಿಗೆ ಅದು ಅವಮಾನವೇ ಆಗಿತ್ತು.

ಒಂದು ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಹಿರಿಯರನ್ನು ಕಡೆಗಣಿಸಿ, ರಾಜಕೀಯ ಓಲೈಕೆ ನಡೆಸಿದವರು ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ರಾರಾಜಿಸುವಾಗ ಹಿರಿಯ ಸಾಧಕರಿಗೆ ಸಹಜವಾಗಿಯೇ ನೋವಾಗುತ್ತಿತ್ತು. ಆದುದರಿಂದ ಒಂದು ಕಾಲದಲ್ಲಿ ಈ ಪ್ರಶಸ್ತಿ, ಸಾಧಕರನ್ನು ಗುರುತಿಸುವುದಕ್ಕೆ ಕಾರಣವಾಗುವ ಬದಲು ಅವಮಾನಿಸುವುದಕ್ಕೆ ಕಾರಣವಾಗುತ್ತಿತ್ತು. ಸಿದ್ದರಾಮಯ್ಯ ಸರಕಾರ ಈ ನಿಟ್ಟಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಕಠಿಣ ನಿಯಮಾವಳಿ ತಂದುದರಿಂದ ಕನ್ನಡದ ಹಿರಿಮೆ ಕಂಡವರ ಪಾಲಾಗುವುದರಿಂದ ಪಾರಾದುದಂತೂ ಸತ್ಯ. ಮುಖ್ಯವಾಗಿ ಪ್ರಶಸ್ತಿ ಪಡೆಯುವವರಿಗೆ 60 ವರ್ಷವಾದರೂ ಆಗಿರಬೇಕು ಎನ್ನುವ ನಿಯಮಾವಳಿಯನ್ನು ತಂದಿತು. ಇದು ರಾಜ್ಯದ ಮೂಲೆ ಮೂಲೆಯಲ್ಲಿರುವ ಹಿರಿಯರನ್ನು ಗುರುತಿಸುವುದಕ್ಕೆ ಒಂದು ಕಾರಣವಾಯಿತು.

ಅದೆಷ್ಟೋ ಸಾಧನೆಗಳನ್ನು ಮಾಡಿ ರಾಜ್ಯದ ಯಾವುದೋ ಮೂಲೆಗಳಲ್ಲಿ ಕನ್ನಡ ಕಟ್ಟಾಳುಗಳು ವನವಾಸ ಮಾಡುತ್ತಿರುವಾಗ, ರಾಜಕಾರಣಿ ಪ್ರತಾಪ ಸಿಂಹರಂತಹ ಎಳೆ ನಿಂಬೆಕಾಯಿಗಳು ಸಾಧಕರ ಪೋಸುಕೊಟ್ಟು ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆಯುತ್ತಿರುವುದು ತೀವ್ರ ಟೀಕೆಗಳಿಗೆ ಗುರಿಯಾಗಿತ್ತು. ಇದೀಗ, ಅಂತಹ ಅನಾಹುತಗಳು ನಡೆಯುವುದು ತಪ್ಪಿದಂತಾಗಿದೆ. ಹಾಗೆಯೇ ರಾಜಕೀಯ ವಶೀಲಿಬಾಜಿಗೂ ಸಾಕಷ್ಟು ಕಡಿವಾಣ ಬಿದ್ದಿದೆ. ಈ ಬಾರಿ ಪ್ರಕಟಗೊಂಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ನೋಡುವಾಗ ಪ್ರಶಸ್ತಿಯ ಕುರಿತಂತೆ ಅಭಿಮಾನ ಉಕ್ಕುತ್ತದೆ. ಇದೇ ಸಂದರ್ಭದಲ್ಲಿ ಸಾಹಿತ್ಯ ವಿಭಾಗದಲ್ಲಿ ‘ವೈದೇಹಿ’ಯ ಹೆಸರು ಹಲವರಿಗೆ ಆಘಾತ ತಂದದ್ದು ಸತ್ಯ. ಇಷ್ಟು ದೊಡ್ಡ ಕತೆಗಾರ್ತಿಗೆ ಈವರೆಗೂ ರಾಜ್ಯೋತ್ಸವ ಪ್ರಶಸ್ತಿ ನೀಡಿರಲಿಲ್ಲವೇ ಎಂದು ಕನ್ನಡ ಪ್ರೇಮಿಗಳು ನೊಂದು ಕೊಳ್ಳುವಂತಹ ಸ್ಥಿತಿ ಬಂದಿದೆ.

ಬಹುಶಃ ಆರಂಭದಿಂದಲೇ ರಾಜ್ಯೋತ್ಸವ ಪ್ರಶಸ್ತಿ ವಿತರಣೆಗೆ ಕಠಿಣ ನಿಯಮಾವಳಿಗಳನ್ನು ಮಾಡಿದ್ದಿದ್ದರೆ, ರಾಜಕೀಯ ಹಸ್ತಕ್ಷೇಪದಿಂದ ಸಂಪೂರ್ಣ ಅದನ್ನು ಹೊರಗಿಟ್ಟಿದ್ದಿದ್ದರೆ ಅದೆಷ್ಟೋ ಅರ್ಹ ಹಿರಿಯರು ಈಗಾಗಲೇ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುತ್ತಿದ್ದರೇನೋ. ಈ ಪ್ರಶಸ್ತಿಯಲ್ಲಿ ಅರ್ಹರು ಇದ್ದರೂ, ಇವರಿಗಿಂತಲೂ ಅರ್ಹರು ಇನ್ನೂ ಉಳಿದುಕೊಂಡಿದ್ದಾರೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಈಗಾಗಲೇ ಹಲವು ಹಿರಿಯರು ಈ ಪ್ರಶಸ್ತಿಯನ್ನು ಪಡೆಯದೆಯೇ ನಮ್ಮಿಂದ ಅಗಲಿ ಹೋಗಿದ್ದಾರೆ. ಇದರಿಂದ ಪ್ರಶಸ್ತಿಗೆ ನಷ್ಟವೇ ಹೊರತು ಆ ಸಾಧಕರಿಗಲ್ಲ. ಅರ್ಹರಿಗೆ ಪ್ರಶಸ್ತಿ ಸಂದಾಗ ಪ್ರಶಸ್ತಿಯ ಗರಿಮೆ ಹೆಚ್ಚುತ್ತದೆ ಮತ್ತು ಉಳಿದ ಸಾಧಕರಿಗೂ, ಯುವ ತಲೆ ಮಾರಿಗೂ ಅದು ಸ್ಫೂರ್ತಿಯಾಗುತ್ತದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಆಂಗ್ಲ ಲೇಖಕ, ಚಿಂತಕ ರಾಮಚಂದ್ರ ಗುಹಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುವುದರ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ.

ಆದರೆ ರಾಮಚಂದ್ರ ಗುಹಾ ಅಂತಾರಾಷ್ಟ್ರೀಯ ಮಟ್ಟದ ಲೇಖಕರು, ಚಿಂತಕರು. ಕನ್ನಡ ಪರಂಪರೆ ಪ್ರತಿಪಾದಿಸುವ ವೌಲ್ಯಗಳಿಗಾಗಿ ಸದಾ ಧ್ವನಿಯೆತ್ತುತ್ತಾ ಬಂದವರು ಗುಹಾ. ನಾಡಿನ ಹಲವು ಚಿಂತಕರ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದವರು. ಆದುದರಿಂದ, ಕನ್ನಡದಲ್ಲಿ ಮಾತನಾಡುವುದಿಲ್ಲ, ಬರೆಯುವುದಿಲ್ಲ ಎನ್ನುವುದನ್ನು ಮುಂದಿಟ್ಟುಕೊಂಡು ನಾವು ತಗಾದೆ ತೆಗೆಯುವುದು ಕನ್ನಡದ ಹಿರಿಮೆಗೆ ತರವಲ್ಲ. ಈಗಾಗಲೇ ರಾಷ್ಟ್ರದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಗುಹಾ ತನ್ನದಾಗಿಸಿಕೊಂಡವರು. ಆದುದರಿಂದ, ಅವರ ಪ್ರತಿಭೆಯನ್ನು ಗೌರವಿಸುವುದು ಕನ್ನಡ ತನ್ನನ್ನು ತಾನು ಗೌರವಿಸಿಕೊಂಡಂತೆ.

ಹಾಗೆ ನೋಡಿದರೆ, ಯೇಸುದಾಸ್ ಕೇರಳ ಮೂಲದವರು. ಸಂಗೀತಕ್ಕೆ ಭಾಷೆ, ಧರ್ಮ ಇವುಗಳ ಎಲ್ಲೆ ಇಲ್ಲ ಎನ್ನುವುದನ್ನು ನಿರೂಪಿಸಿದವರು. ಮಾತೃಭಾಷೆ ಕನ್ನಡವಲ್ಲದಿದ್ದರೂ ಕನ್ನಡದಲ್ಲಿ ಅಪಾರ ಗೀತೆಗಳ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದವರು. ಅವರಿಗೂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಇದಕ್ಕಾಗಿಯೂ ನಾವು ಸರಕಾರವನ್ನು ಅಭಿನಂದಿಸಬೇಕಾಗಿದೆ. ಕ್ರಿಶ್ಚಿಯನ್ ಧರ್ಮದಲ್ಲಿ ಹುಟ್ಟಿ, ಭಕ್ತಿ ಸಂಗೀತಕ್ಕೆ ಹೊಸ ದಿಕ್ಕು ಕೊಟ್ಟರು. ಇಂದು ಯಾವುದೇ ಹಿಂದೂ ದೇವಸ್ಥಾನಗಳಲ್ಲಿ ಮೊಳಗುವುದು ಯೇಸುದಾಸ್ ಹಾಡಿದ ಭಕ್ತಿ ಗೀತೆಗಳೇ. ಬಹು ಸಂಸ್ಕೃತಿಯ ಈ ನಾಡಿಗೆ ತಮ್ಮ ಹಾಡುಗಳ ಮೂಲಕ ಸತ್ವ ತುಂಬಿದವರು ಯೇಸುದಾಸ್. ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಮೂಲಕ ಕನ್ನಡ ಪರಂಪರೆಯ ಹಿರಿಮೆಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಂತಾಗಿದೆ.

ಉಳಿದಂತೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಎಲ್ಲ ಹಿರಿಯರೂ ಅರ್ಹರೇ ಆಗಿದ್ದಾರೆ ಎನ್ನುವುದು ಸಮಾಧಾನ ತರುವ ವಿಷಯ. ಇದೇ ಸಂದರ್ಭದಲ್ಲಿ ಈ ಪಟ್ಟಿಯಲ್ಲಿರುವ ಹೆಸರುಗಳಿಗಿಂತ ಅಧಿಕ ಸಾಧನೆ ಮಾಡಿದವರು ನಮ್ಮ ನಡುವೆ ಇನ್ನೂ ಹಲವರಿದ್ದಾರೆ ಎನ್ನುವುದನ್ನು ಮರೆಯಬಾರದು. ಮುಂದಿನ ಬಾರಿಯಾದರೂ ಅವರನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡುವುದು ಸರಕಾರದ ಹೊಣೆಗಾರಿಕೆಯಾಗಿದೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಸಾಧನೆಗಳು ಹೊಸ ತಲೆಮಾರಿಗೆ ಮಾದರಿಯಾಗಲಿ. ಅವರನ್ನು ಇನ್ನಷ್ಟು ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಲು ಪ್ರೇರಣೆ ನೀಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News