×
Ad

ಪದೇ ಪದೇ ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎನ್ನುವ ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ: ಬಿ.ಎಸ್.ಯಡಿಯೂರಪ್ಪ

Update: 2017-10-31 20:24 IST

ತುಮಕೂರು, ಅ.31: ಪದೇ ಪದೇ ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಹೈಕೋರ್ಟ್‍ನಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶ್ರೀಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಎಲುಬಿಲ್ಲದ ನಾಲಿಗೆ. ಹೋದ ಕಡೆಯಲ್ಲಾ ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಸಿಎಂ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಕೀಲರೊಂದಿಗೆ ಚರ್ಚಿಸಿ ಸದ್ಯದಲ್ಲೇ ಅವರ ಸುಳ್ಳು ಹೇಳಿಕೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಹೇಳಿದರು.

ನನ್ನನ್ನು ಜೈಲಿಗೆ ಕಳುಹಿಸಲು ಅವರು ಯಾರು ಎಂದು ಪ್ರಶ್ನಿಸಿದ ಅವರು, ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ವಿನಾ ಕಾರಣ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೊಕ್ಕಿನಿಂದ ಮೆರೆಯುತ್ತಿದ್ದು, ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ನಾನು ಮಾಡಿದ್ದೇ ಸರಿ ಎಂಬ ರೀತಿಯಲ್ಲಿ ವರ್ತಿಸುತ್ತಾ, ಮನಬಂದಂತೆ ಸರಕಾರದ ಖಜಾನೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತನ್ನ ವರ್ಚಸ್ಸಿನಿಂದ ಇಡೀ ವಿಶ್ವದ ಗಮನ ಸೆಳೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನನ್ನ ಕಂಡರೆ ಭಯ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇದು ಅವರ ಮೂರ್ಖತನದ ಪರಮಾವಧಿ. ಇಡೀ ವಿಶ್ವವೇ ಪ್ರಧಾನಿಗಳತ್ತ ತಿರುಗಿ ನೋಡುತ್ತಿರುವ ಸಂದರ್ಭದಲ್ಲಿ ಸಾಮಾನ್ಯ ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡೋದು ಶೋಭೆ ತರುವುದಿಲ್ಲ ಎಂದು ಹರಿಹಾಯ್ದರು.

ನಾಡಿನ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭಕ್ತಿಯಿಂದ ಉಪವಾಸ ಇದ್ದು, ಭೇಟಿ ನೀಡಿ ಶ್ರೀಮಂಜುನಾಥನ ಆಶೀರ್ವಾದ ಪಡೆದರು. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ನಾನು ಮೀನು, ಕೋಳಿ ತಿಂದು ಹೋಗಿದ್ದೆ ಎಂದು ಹೇಳುವ ಮೂಲಕ ನಾಡಿನ ಕೋಟ್ಯಂತರ ಭಕ್ತರಿಗೆ ಅಪಮಾನ ಮಾಡಿದ್ದಾರೆ. ಶ್ರೀ ಕ್ಷೇತ್ರಕ್ಕೆ ತೆರಳಿದ್ದ ಈ ಮನುಷ್ಯ ಸ್ವಾಮಿಯ ದರ್ಶನಕ್ಕೆ ದೇವಾಲಯದ ಒಳಗೂ ಹೋಗದೆ ಆಚೆಯೇ ನಿಂತು ವಾಪಸ್ ಬಂದಿದ್ದಾರೆ. ಈ ರೀತಿಯ ನಡವಳಿಕೆಯಿಂದ ಇವರೊಬ್ಬರಿಗೆ ಕೆಟ್ಟದ್ದಾಗಲ್ಲ, ಇಡೀ ನಾಡಿಗೆ ಕೆಟ್ಟದ್ದಾಗುತ್ತದೆ ಎಂಬ ಭಯ ನಮ್ಮನ್ನು ಕಾಡುತ್ತಿದೆ ಎಂದರು.

ಇಷ್ಟು ದಿನ ಕಣ್ಣು ಮುಚ್ಚಿ ಕುಳಿತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ವಿದ್ಯುತ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಿನಾ ಕಾರಣ ನನ್ನ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇವರ ಹಗರಣಗಳನ್ನು ಮುಚ್ಚಿ ಹಾಕುವ ಸಲುವಾಗಿ ಈ ರೀತಿಯ ಆರೋಪಗಳ ಸುರಿಮಳೆ ಗೈಯುತ್ತಿದ್ದಾರೆ ಎಂದ ಅವರು, ನ.2 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ರ್ಯಾಲಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಚಾಲನೆ ನೀಡಲಿದ್ದು, ರ್ಯಾಲಿಯಲ್ಲಿ ಸುಮಾರು ಮೂರು ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪರಿವರ್ತನಾ ರ್ಯಾಲಿ ಬಳಿಕ ನಡೆಯುವ ಸಮಾವೇಶದಲ್ಲಿ ಶಾಸಕ ಯೋಗೀಶ್ವರ್, ಕುಡುಚಿ ಶಾಸಕ ಸೇರಿದಂತೆ ಹಲವು ಮಂದಿ ಶಾಸಕರು, ಮುಖಂಡರುಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್ ಅವರ ರಾಜೀನಾಮೆ ಅನಿವಾರ್ಯ. ಬೆಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಅವರು ಮಾಡಿರುವ ಹಗರಣಗಳನ್ನು ಬಯಲಿಗೆಳೆಯುತ್ತೇನೆ ಎಂದ ಅವರು, ನಾನು ಯಾವುದೇ ಕೆಲಸ ಮಾಡುವ ಮುನ್ನ ಶ್ರೀಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದು ಮುಂದಕ್ಕೆ ಹೆಜ್ಜೆ ಹಾಕುತ್ತೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿ. ಸೋಮಣ್ಣ, ಶಾಸಕ ಬಿ. ಸುರೇಶ್‍ಗೌಡ, ಮಾಜಿ ಸಂಸದ ಜಿ.ಎಸ್. ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ. ಜ್ಯೋತಿಗಣೇಶ್, ಕೊಪ್ಪಲ್ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News