ಮದ್ದೂರು: ಮಹಿಳೆ ಮೇಲೆ ಅತ್ಯಾಚಾರವೆಸಗಿ ಕತ್ತು ಕೊಯ್ದು ಕೊಲೆ
ಮದ್ದೂರು, ಅ.31: ಹಾಡಹಗಲೇ ಗೃಹಿಣಿಯೊಬ್ಬರನ್ನು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕತ್ತು ಕೊಯ್ದು, ಕೈಕತ್ತರಿಸಿ ಕೊಲೆಗೈದಿರುವ ಘಟನೆ ಪಟ್ಟಣದ ಸಮೀಪ ಮಂಗಳವಾರ ನಡೆದಿದೆ.
ತಾಲೂಕಿನ ಮಾಲಗಾರನಹಳ್ಳಿಯ ರಾಜು ಅವರ ಪತ್ನಿ ಸವಿತಾ (35) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.
ರಾಜು ಮತ್ತು ಸವಿತಾ ಮದ್ದೂರು ಪಟ್ಟಣದ ಸೆಸ್ಕ್ ಕಚೇರಿ ಸಮೀಪ ಟೀ ಅಂಗಡಿ ಇಟ್ಟುಕೊಂಡು ಮದ್ದೂರಿನಲ್ಲೇ ವಾಸಮಾಡಿಕೊಂಡಿದ್ದರು.
ದಂಪತಿ ಟೀ ಅಂಗಡಿ ಜತೆಗೆ ಎರಡು ಕುರಿಗಳನ್ನು ಸಾಕಿದ್ದು, ಮಧ್ಯಾಹ್ನ ಸುಮಾರು 3 ಗಂಟೆ ವೇಳೆ ಸವಿತಾ ಕುರಿಗೆ ಹುಲ್ಲು ತರಲು ಹೋಗಿದ್ದಾಗ ಈ ಕೃತ್ಯವೆಸಗಲಾಗಿದೆ ಎನ್ನಲಾಗಿದ್ದು, ಮದ್ದೂರು ಹೊರವಲಯದ ವೈದ್ಯನಾಥಪುರ ಸಮೀಪ ಗದ್ದೆಯಲ್ಲಿ ಹುಲ್ಲು ಕೊಯ್ಯುತ್ತಿದ್ದ ಸವಿತಾಳನ್ನು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದ ಪತಿ ರಾಜು, ಇತರರೊಡನೆ ಸ್ಥಳಕ್ಕೆ ಧಾವಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸವಿತಾಳನ್ನು ಪಟ್ಟಣದ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
'ತನ್ನ ಮೇಲೆ ಅತ್ಯಾಚಾರವೆಸಗಿ ನನ್ನ ಬಳಿಯಿದ್ದ ಕುಡುಗೋಲಿನಿಂದಲೇ ಹಲ್ಲೆ ನಡೆಸಲಾಯಿತು' ಎಂದು ಸವಿತಾ ಮೃತಪಡುವ ಮುನ್ನ ಹೇಳಿದರೆನ್ನಲಾಗಿದೆ.
ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.