ಜಪಾನ್ ಪ್ರಧಾನಿಯಾಗಿ ಶಿನ್ಝೊ ಅಬೆ ಪುನರಾಯ್ಕೆ

Update: 2017-11-01 10:30 GMT

ಟೋಕಿಯೊ,ನ.01 :  ಅಕ್ಟೋಬರ್ 22ರಂದು ನಡೆದ ಚುನಾವಣೆಯಲ್ಲಿ ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿ ನೇತೃತ್ವದ ಮೈತ್ರಿ ಕೂಟ ಭಾರೀ ಬಹುಮತ ಗಳಿಸಿದ ನಂತರ ಜಪಾನಿನ ಶಿನ್ಝೊ ಅಬೆ ಅವರು ಬುಧವಾರ ಪ್ರಧಾನಿಯಾಗಿ ಪುನರಾಯ್ಕೆಯಾಗಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಇನ್ನೇನು ಕೆಲವೇ ದಿನಗಳಿವೆ ಎನ್ನುವಾಗ ಅಬೆ ಅವರ ಪುನರಾಯ್ಕೆ ನಡೆದಿದೆ.

63 ವರ್ಷದ ಅಬೆ ಅವರು ಮೊದಲ ಬಾರಿಗೆ ಡಿಸೆಂಬರ್ 2012ರಲ್ಲಿ ಪ್ರಧಾನಿಯಾದಾಗ ದೇಶದ ಆರ್ಥಿಕತೆ ಹಆಗೂ ರಕ್ಷಣಾ ಕ್ಷೇತ್ರವನ್ನು ಬಲಪಡಿಸುವ ಆಶ್ವಾಸನೆ ನೀಡಿದ್ದರು. ಅಬೆ ಅವರು ಈಗಿರುವ ಕ್ಯಾಬಿನೆಟ್ ಸಚಿವರನ್ನೇ ಪುನರ್ ನೇಮಕಗೊಳಿಸುವ ಸಾಧ್ಯತೆಯಿದೆಯೆನ್ನಲಾಗಿದ್ದು  ಮಾರ್ಚ್ 31, 2018ರವರೆಗಿನ ತನಕದ ಬಜೆಟ್ ನಲ್ಲಿ ಮಕ್ಕಳ ಆರೈಕೆ ಹಾಗೂ ಉತ್ಪಾದನಾ ಕ್ಷೇತ್ರದ ಬಲವೃದ್ಧಿಗೆ ಒತ್ತು ನೀಡುವಂತೆ ನಿರ್ದೇಶನ ನೀಡಲಿದ್ದಾರೆಂದು ತಿಳಿದು ಬಂದಿದೆ.

ಸೋಮವಾರ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರೊಡನೆ ದೂರವಾಣಿ ಮೂಲಕ ಅಬೆ ಮಾತನಾಡಿದಾಗ ಎರಡೂ ದೇಶಗಳ ನಾಯಕರು ಉತ್ತರ ಕೊರಿಯಾದ ಅಣ್ವಸ್ತ್ರ ಹಾಗೂ ಕ್ಷಿಪಣಿ ಕ್ಷೇತ್ರದ ಅಭಿವೃದ್ಧಿಯನ್ನು ಎದುರಿಸಲು ಜಂಟಿ ಪ್ರಯತ್ನ ನಡೆಸುವ ಬಗ್ಗೆ ಮಾತನಾಡಿದ್ದಾರೆ.

ಜಪಾನ್ ಮತ್ತು ಅಮೆರಿಕಾ ನಡುವಣ ಮೈತ್ರಿ ಸದಾ ಮುಂದುವರಿಯುವುದು ಎಂದು ಅಮೆರಿಕಾ ಅಧ್ಯಕ್ಷರು ಅಬೆ  ಅವರಿಗೆ ಹೇಳಿದ್ದಾರೆ. ಟ್ರಂಪ್ ಅವರು ಅಧ್ಯಕ್ಷರಾಗಿ ಆಯ್ಕೆಯಾದಂದಿನಿಂದ ಎರಡೂ ನಾಯಕರು ಭಾರೀ ಆತ್ಮೀಯ ಸಂಬಂಧ ಹೊಂದಿದ್ದಾರೆ. ನವೆಂಬರ್ 5ರಿಂದ 7ರ ತನಕ ಟ್ರಂಪ್ ಜಪಾನ್ ಭೇಟಿ ಕೈಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News