×
Ad

ರಾಜಕಾರಣಕ್ಕಾಗಿ ಬಿಜೆಪಿಯಿಂದ ಟಿಪ್ಪು ಜಯಂತಿಗೆ ವಿರೋಧ : ಪರಮೇಶ್ವರ್ ಟೀಕೆ

Update: 2017-11-01 18:46 IST

ಮಡಿಕೇರಿ, ನ.1 : ರಾಜ್ಯ ಸರ್ಕಾರ ಆಯೋಜಿಸಿರುವ ‘ಟಿಪ್ಪು ಜಯಂತಿ’ಯನ್ನು ರಾಜಕಾರಣಕ್ಕಾಗಿ ಬಿಜೆಪಿ ಮಂದಿ ವಿರೋಧಿಸುತ್ತಿದ್ದು, ವಿರೋಧವನ್ನು ರಾಜಕೀಯವಾಗಿಯೇ ಎದುರಿಸಲಾಗುವುದೆಂದು ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಸ್ಪಷ್ಪಡಿಸಿದ್ದಾರೆ.

ನಗರದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಆರ್.ಅಶೋಕ್ ಅವರು ಈ ಹಿಂದೆ ಟಿಪ್ಪು ಪೇಟ ಧರಿಸಿ, ಖಡ್ಗ ಹಿಡಿದ ವಿಚಾರಗಳು ಎಲ್ಲರಿಗೂ ತಿಳಿದಿದ್ದು, ಇದೀಗ ಟಿಪ್ಪು ಜಯಂತಿಯನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತಿದ್ದಾರೆ. ಅದಕ್ಕೆ ತಕ್ಕ ಉತ್ತರವನ್ನು ರಾಜಕೀಯವಾಗಿಯೇ ನೀಡಲಾಗುತ್ತದೆ ಎಂದರು. 

ಟಿಪ್ಪು ಜಯಂತಿಯನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಕರ್ನಾಟಕ ಯಾತ್ರೆ ನವೆಂಬರ್ 8 ರಂದು ಕೊಡಗಿಗೆ ಆಗಮಿಸುವ ಸಂದರ್ಭ ಇಲ್ಲಿನ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

 ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮಾತನಾಡಿ, ಟಿಪ್ಪು ಜಯಂತಿ ರಾಜ್ಯ ಸರ್ಕಾರದ ನಿರ್ಧಾರವಾಗಿದ್ದು, ರಾಷ್ಟ್ರಪತಿಗಳೇ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗಿದ್ದೂ ಬಿಜೆಪಿ ಮಂದಿ ಕೇವಲ ರಾಜಕೀಯ ಕಾರಣಗಳಿಗಾಗಿ ಟಿಪ್ಪು ಜಯಂತಿಯನ್ನು ವಿರೋಧಿಸಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

'ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆ' ಕಾರ್ಯಕ್ರಮಕ್ಕೆ ಜನ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯೆಂದು ಇದೇ ಸಂದರ್ಭ ತಿಳಿಸಿದರು. 
ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸುವುದಕ್ಕೂ ಮೊದಲು ಕಾಂಗ್ರೆಸ್ ನಾಯಕರುಗಳು ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಸಾರ್ವಜನಿಕರಿಗೆ ರಾಜ್ಯ ಸರಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News