×
Ad

ಯಡಿಯೂರಪ್ಪ ಆಪ್ತನಿಂದ ಕೊಲೆಗೆ ಸಂಚು : ಆರೋಪ

Update: 2017-11-01 18:55 IST

ಬೆಂಗಳೂರು, ನ.1: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಅಪ್ತ ಎನ್.ಆರ್.ಸಂತೋಷ್ ನನ್ನ ಕೊಲೆಗೆ ಸಂಚು ರೂಪಿಸಿದ್ದು, ನನಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಸೂಕ್ತ ರಕ್ಷಣೆ ನೀಡುವಂತೆ ಕೋರಿ ವಿಧಾನ ಪರಿಷತ್ತಿನ ವಿಪಕ್ಷ  ನಾಯಕ ಕೆ.ಎಸ್. ಈಶ್ವರಪ್ಪ ಅವರ ಆಪ್ತ ಸಹಾಯಕ ಎನ್.ಎಸ್.ವಿನಯ್  ಅಮತಹಳ್ಳಿ ಠಾಣಾ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಬುಧವಾರ ನಗರದ ಅಮತಹಳ್ಳಿ ಪೊಲೀಸ್ ಠಾಣೆಗೆ ಖುದ್ದು ಹೋಗಿ ತಮ್ಮ ರಕ್ಷಣೆಗೆ ಮನವಿ ಮಾಡಿರುವ ಎನ್.ಎಸ್.ವಿನಯ್, ಅಪಹರಣ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಎನ್.ಆರ್.ಸಂತೋಷ್ ಹಾಗೂ ಆತನ ಸಹಚರರಿಂದ ಕೊಲೆ ಬೆದರಿಕೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಎಸ್.ವಿನಯ್, ಅಪಹರಣ ಪ್ರಕರಣದ ಆರೋಪಿ ಎನ್.ಆರ್.ಸಂತೋಷ್ ಎಂಬಾತ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತರಾಗಿದ್ದು, ಈತನ ಬೆಂಬಲಕ್ಕೆ ಬಿ ಎಸ್ ವೈ ಇರುವುದರ  ಬಗ್ಗೆ ಅನುಮಾನವಿದ್ದು, ಸಂತೋಷ್ ನ್ಯಾಯಾಲಯದಲ್ಲಿ ಷರತ್ತು ಬದ್ಧ ಜಾಮೀನು ಪಡೆದು ಓಡಾಡಿಕೊಂಡು ಇದ್ದಾರೆ ಎಂದು ಆರೋಪಿಸಿದರು.

ನ್ಯಾಯಾಲಯದ ಆದೇಶದಲ್ಲಿ ಪೊಲೀಸ್ ತನಿಖೆಗೆ ಸ್ಪಂದಿಸಬೇಕು, ವಿಚಾರಣೆಗೆ ಸಹಕರಿಸಬೇಕು ಎಂದು ಸ್ಪಷ್ಟ ಆದೇಶವಿದ್ದರೂ, ಇದನ್ನು ಉಲ್ಲಂಘಿಸಿ ತನಿಖೆಗೆ ಸಹಕಾರ ನೀಡಿಲ್ಲ.ಈ ಸಂಬಂಧ ಪೊಲೀಸರೂ ಈತನ ಜಾಮೀನು ವಜಾಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ವಿನಯ್ ಹೇಳಿದರು.

ನನ್ನನ್ನು ಅಪಹರಣ ಮಾಡುವ ಪ್ರಯತ್ನ ವಿಫಲಗೊಂಡ ಬಳಿಕ ನನ್ನ ಕೊಲೆಗೆ ಸಂತೋಷ್ ಹಾಗೂ ಆತನ ಸಹಚರರು ಸಂಚು ರೂಪಿಸಿರುವುದಾಗಿ ನನಗೆ ತಿಳಿದುಬಂದಿದೆ.ಹೀಗಾಗಿ, ಸೂಕ್ತ ರಕ್ಷಣೆ ನೀಡುವ ಜೊತೆಗೆ ಸಂತೋಷ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಬೇಕೆಂದು ವಿನಯ್ ಪ್ರಕಟನೆಯಲ್ಲಿ  ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News