"ಪ್ರಧಾನಿ ಮೋದಿಯಿಂದ ಜಿಎಸ್‍ಟಿ ಮೂಲಕ ದೇಶದ ಲೂಟಿ"

Update: 2017-11-01 14:37 GMT

ಮಡಿಕೇರಿ,ನ.1 :ಯುಪಿಎ ಸರ್ಕಾರದ ಅವಧಿಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ದೇಶದ ಆರ್ಥಿಕ ಕ್ಷೇತ್ರವನ್ನು ನೋಟು ಅಮಾನ್ಯೀಕರಣದ ಮೂಲಕ ಒಂದೇ ಕ್ಷಣದಲ್ಲಿ ನಾಶಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‍ಟಿ ಹೆಸರಿನಲ್ಲಿ ದೇಶವನ್ನು ಲೂಟಿ ಮಾಡುತ್ತಿದ್ದಾರೆ, ಆ ಮೂಲಕ ಜನರನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ವೇಣುಗೋಪಾಲ್ ಆರೋಪಿಸಿದ್ದಾರೆ. 

ನಗರದ ಕ್ರಿಸ್ಟಲ್ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ‘ಬೂತ್ ಮಟ್ಟದ ಕಾಂಗ್ರೆಸ್ ಪ್ರತಿನಿಧಿಗಳ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣದ ದಿನವಾದ ನವೆಂಬರ್ 8ನ್ನು ಬಿಜೆಪಿ ಸಾಧನೆಯ ದಿನವನ್ನಾಗಿ ಮಾಡಲು ಹೊರಟಿದ್ದರೆ ಕಾಂಗ್ರೆಸ್ ಆ ದಿನವನ್ನು ‘ಕಪ್ಪು ದಿನ’ವನ್ನಾಗಿ ಆಚರಿಸಲಿದೆ ಎಂದು ತಿಳಿಸಿದರು.

 ಬಿಜೆಪಿ ಪಕ್ಷ ಆಹಾರ ಮತ್ತು ಧರ್ಮದ ಹೆಸರಿನಲ್ಲಿ ಜನರಲ್ಲಿ ಒಡಕು ಮೂಡಿಸುವ ಪ್ರಯತ್ನವನ್ನು ಮಾಡುತ್ತಿದೆ. ಕಾಂಗ್ರೆಸ್ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಮೂಲಕ ಜಾತ್ಯತೀತವಾದ ಮತ್ತು ಸಮಾನತೆಯ ಸಮಾಜದ ಚಿಂತನೆಯನ್ನು ಹೊಂದಿರುವ ಪಕ್ಷವಾಗಿದೆ. ಆದರೆ ಬಿಜೆಪಿ ಜನರನ್ನು ಒಡೆಯುವ ಸಿದ್ಧಾಂತ ಹೊಂದಿರುವ ಪಕ್ಷವಾಗಿದೆ ಎಂದು ಆರೋಪಿಸಿದರು. ಕಪ್ಪು ಹಣದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವುದಾಗಿ ಹೇಳುತ್ತ ನೋಟು ಅಮಾನ್ಯೀಕರಣ ಮಾಡಿದ ಕೇಂದ್ರದ ಕ್ರಮದಿಂದ ಯುವ ಸಮೂಹ ಉದ್ಯೋಗವನ್ನು ಕಳೆದುಕೊಂಡಿದೆಯೆಂದು ಟೀಕಿಸಿದರು.

ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಹಾಗೂ ಜನಪರವಾದ ಕಾರ್ಯಕ್ರಮಗಳನ್ನು ನೀಡಿರುವ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಸರ್ಕಾರ ಸದಾ ಸಿದ್ಧವಿರುವುದಾಗಿ ಸವಾಲು ಎಸೆದರು.

ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿದ್ದು, ಆತನ ಜಯಂತಿಯನ್ನು ರಾಜ್ಯ ಸರ್ಕಾರ ನಡೆಸುತ್ತಿದೆ. ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು  ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಹೊಗಳಿದ್ದು, ಇದೀಗ ಟಿಪ್ಪು ಬಗ್ಗೆ ಬಿಜೆಪಿಯ ನಿಲುವೇನೆಂದು ಪ್ರಶ್ನಿಸಿದರು.

ಭಿನ್ನಾಭಿಪ್ರಾಯ ಬಿಡಿ

ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ರಾಜಕೀಯವಾಗಿ ಕೊಡಗಿನ ಕೊಡುಗೆ ಶೂನ್ಯವಾಗಿದ್ದು, ಕಳೆದ ಚುನಾವಣೆಯಲ್ಲಿ ಇಲ್ಲಿನ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಸೋಲನ್ನು ಕಂಡಿದೆ. ಮೊದಲು ಕಾಂಗ್ರೆಸ್ಸಿಗರು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗೂಡಿ ಕಾರ್ಯನಿರ್ವಹಿಸಲು ಮುಂದಾದಲ್ಲಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಿದೆ ಎಂದು ವೇಣುಗೋಪಾಲ್ ಅಭಿಪ್ರಾಯಪಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಮಾತನಾಡಿ, ಕೊಡಗಿನ ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಬೇಕೆಂದು ಕರೆ ನಿಡಿದರು.ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣು ಗೋಪಾಲ್, ಕೆಪಿಸಿಸಿ ಅಧ್ಯಕ್ಷರಾದ ಡಾ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಸಿ. ಚಂದ್ರಶೇಖರ್, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಪ್ರಮುಖರಾದ ಸೈಯ್ಯದ್ ಅಹಮ್ಮದ್ ಅವರಿಗೆ ಕೊಡಗಿನ ಪೇಟ ತೊಡಿಸಿ, ವಡಿಕತ್ತಿಯನ್ನಿತ್ತು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಶಿವು ಮಾದಪ್ಪ, ಪ್ರಮುಖರಾದ ಚಂದ್ರಮೌಳಿ, ಕೆಪಿಸಿಸಿ ಉಪಾಧ್ಯಕ್ಷ ಕೆ.ಎಂ. ಇಬ್ರಾಹಿಂ, ಕೆಪಿಇಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಎಂಎಲ್‍ಸಿ ವೀಣಾ ಅಚ್ಚಯ್ಯ, ಅgಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಪಕ್ಷದ ಜಿಲ್ಲಾ ಉಸ್ತುವಾರಿಗಳಾದ ಮಮತಾ ಕಟ್ಟಿ, ಶುಭದಾಯಿನಿ, ಪ್ರಮುಖರಾದ ಪಿ.ಸಿ. ಹಸೈನಾರ್, ಕೆ.ಎಂ.ಲೋಕೇಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News