ನೋಟ್ ಬ್ಯಾನ್ ನಿಂದ ಪತ್ತೆಯಾದ ಕಪ್ಪು ಹಣದ ಬಗ್ಗೆ ಕೇಂದ್ರ ಸರಕಾರ ಮಾಹಿತಿ ನೀಡಿದೆಯೇ: ಡಾ.ಜಿ.ಪರಮೇಶ್ವರ್ ಪ್ರಶ್ನೆ

Update: 2017-11-01 14:46 GMT

ಮಡಿಕೇರಿ,ನ.1:ಜಿಎಸ್‍ಟಿ ಜಾರಿಯಿಂದ ಸಣ್ಣ ಉದ್ಯಮಗಳು ನೆಲಕಚ್ಚಿದ್ದು, ನೋಟು ಅಮಾನ್ಯೀಕರಣದಿಂದ ಎಷ್ಟು ಪ್ರಮಾಣದ ಕಪ್ಪು ಹಣವನ್ನು ಪತ್ತೆ ಹಚ್ಚಲಾಗಿದೆ ಎನ್ನುವ ಮಾಹಿತಿಯನ್ನು ಕೇಂದ್ರ ನೀಡಿದೆಯೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.

ನಗರದ ಕ್ರಿಸ್ಟಲ್ ಸಭಾಂಗಣದಲ್ಲಿ ನಡೆದ ಬೂತ್ ಮಟ್ಟದ ಪ್ರತಿನಿಧಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಏಕರೂಪದ ತೆರಿಗೆ ಜಿಎಸ್‍ಟಿ ಜಾರಿಗೆ ಪ್ರಯತ್ನಿಸಿತ್ತು. ಆದರೆ, ಇಂದು ಬಿಜೆಪಿ ತಂದಿರುವ ಜಿಎಸ್‍ಟಿ ನಮ್ಮ ಚಿಂತನೆಯ ಜಿಎಸ್‍ಟಿ ಅಲ್ಲವೆಂದು ಟೀಕಿಸಿದರು. 

ಕೇಂದ್ರದ ಬಿಜೆಪಿ ಸರ್ಕಾರದ ಮೂರೂವರೆ ವರ್ಷದ ಅವಧಿಯಲ್ಲಿ ಇಂಧನ ತೈಲ ಬೆಲೆಯನ್ನು 14 ಬಾರಿ ಹೆಚ್ಚಳ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ 45 ಡಾಲರ್‍ಗೆ ಕುಸಿದ ಸಂದರ್ಭವೂ ಅದರ ಲಾಭವನ್ನು ಜನರಿಗೆ ಒದಗಿಸಲು ಕೇಂದ್ರ ಮುಂದಾಗಿಲ್ಲ. 77 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹದ ಪ್ರಮಾಣ ಪ್ರಸ್ತುತ 2.42 ಲಕ್ಷ ಕೋಟಿಗಳಷ್ಟಾಗಿದೆಯಾದರು ಆ ಹಣ ಎಲ್ಲಿದೆ, ಯಾವ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದಿಂದ ಬಳಕೆಯಾಗುತ್ತಿದೆಯೆಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಅದರಂತೆ ಇಲ್ಲಿಯವರೆಗೆ 7 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಸೃಷ್ಟಿಯಾಗಿರುವ ಉದ್ಯೋಗ ಕೇವಲ 3.50 ಲಕ್ಷವೆಂದು ಲೇವಡಿ ಮಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ತಾನು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ.95 ರಷ್ಟನ್ನು ಈಡೇರಿಸುವ ಮೂಲಕ ಉತ್ತಮ ಕಾರ್ಯ ನಿರ್ವಹಿಸಿದ್ದು, ಮತ್ತೆ ಪಕ್ಷ ಅಧಿಕಾರಕ್ಕೇರಲು ತಮ್ಮೊಳಗಿನ ವ್ಯತ್ಯಾಸ, ಭಿನ್ನಾಭಿಪ್ರಾಯಗಳನ್ನು ಬಿಟ್ಟು ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.

ಮುಂದಿನ 2018ರ ಏಪ್ರಿಲ್‍ನಲ್ಲಿ ನಡೆಯಬಹುದಾದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಗೆದ್ದು ಬರುವ ಮೂಲಕ ಬಡವರ್ಗದ ಜನರ ಬದುಕನ್ನು ಉತ್ತಮ ಪಡಿಸುವ ನಿಟ್ಟಿನ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕಿದೆಯೆಂದು ತಿಳಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳಿಗೆ ಅನುಗುಣವಾಗಿ ಬಜೆಟ್ ಮಾಡುವ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನವನ್ನು ಒದಗಿಸಿ ಅದನ್ನು ಕಾರ್ಯಗತಗೊಳಿಸಿದೆ. ಬಡವರ್ಗಕ್ಕೆ ಉಚಿತವಾಗಿ ಪಡಿತರ ಅಕ್ಕಿಯನ್ನು ಒದಗಿಸುವ ಯೋಜನೆಯಡಿ ರಾಜ್ಯದ 1.10 ಕೋಟಿ ಕುಟುಂಬಗಳು ಸೌಲಭ್ಯವನ್ನು ಪಡೆದುಕೊಂಡಿವೆ. ಇದರಿಂದ ಬರದ ನಾಡಾದ ಉತ್ತರ ಕರ್ನಾಟಕ ಭಾಗದ ಬೀದರ್, ರಾಯಚೂರು ವಿಭಾಗಗಳಿಂದ ಜನರು ಗುಳೆ ಹೋಗುವುದು ನಿಂತಿದೆ ಎಂದರು.

ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಪ್ರಯೋಜನವನ್ನು 63 ಲಕ್ಷ ಮಕ್ಕಳು ಪಡೆದುಕೊಂಡಿದ್ದರೆ, ಕ್ಷೀರಭಾಗ್ಯ ಯೋಜನೆಯ ಪ್ರಯೋಜನವನ್ನು ಮಕ್ಕಳು ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ ಡಾ.ಪರಮೇಶ್ವರ್, ರಾಜೀವ್ ಗಾಂಧಿ ಅವರು ತಂದ ಮಹಿಳಾ ಮೀಸಲಾತಿಯಿಂದ ಸಾಕಷ್ಟು ಮಹಿಳೆಯರು ಪಂಚಾಯ್ತಿಗಳಲ್ಲಿ ಅಧಿಕಾರವನ್ನು ನಡೆಸುವಂತಾಗಿದೆ. ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕೆನ್ನುವ ಕಾಂಗ್ರೆಸ್ ಪ್ರಸ್ತಾವನೆಗೆ ಬಿಜೆಪಿ ಅನುಮೋದನೆಯನ್ನು ನೀಡಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೂಲಕ ಅದನ್ನೂ ಜಾರಿಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 50 ಸಾವಿರದವರೆಗಿನ ಸಹಕಾರ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಿದ್ದು, ವಾಣಿಜ್ಯ ಬ್ಯಾಂಕ್‍ಗಳಲ್ಲಿನ ಸಾಲ ಮನ್ನಾಕ್ಕೆ ಕೇಂದ್ರವನ್ನು ಆಗ್ರಹಿಸಿದಾಗ ಅದು ಸಾಲ ಮನ್ನಾ ಸಾಧ್ಯವಿಲ್ಲವೆಂದು ಉಲ್ಟಾ ಹೊಡೆದಿದೆ. ಈ ಹಿಂದೆ ಸಾಲಮನ್ನಾ ಮಾಡಿದಲ್ಲಿ ಕೇಂದ್ರದಿಂದ ಸಾಲ ಮನ್ನಾ ಮಾಡಿಸುವುದಾಗಿ ಹೇಳಿದ್ದ ಯಡಿಯೂರಪ್ಪ ಅವರಿಂದ ಇದೀಗ ಕೇಂದ್ರದಿಂದ ಸಾಲ ಮನ್ನಾ ಮಾಡಿಸಲು ಸಾಧ್ಯವಾಗಿಲ್ಲವೆಂದು ಟೀಕಿಸಿದರು.

ಕರಿಮೆಣಸು ಆಮದಿನ ವಿರುದ್ಧ ಕ್ರಮ
ಜಿಲ್ಲೆಗೆ ವಿಯೆಟ್ನಾಂ ಕರಿಮೆಣಸಿನ ಆಮದಿನಿಂದ ಇಲ್ಲಿನ ಕರಿಮೆಣಸಿನ ಧಾರಣೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು. ಸಮಸ್ಯೆ ಬಗೆಹರಿಕೆಗೆ ಮುಖ್ಯ ಮಂತ್ರಿಗಳು ಮತ್ತು ಗೃಹ ಸಚಿವರೊಂದಿಗೆ ಚರ್ಚಿಸುವುದಾಗಿ ಡಾ.ಪರಮೇಶ್ವರ್ ತಿಳಿಸಿದರು.

ರಾಜ್ಯ ಸರ್ಕಾರ ನೂತನ ತಾಲ್ಲೂಕುಗಳನ್ನು ಈಗಾಗಲೆ ಘೋಷಿಸಿದ್ದು, ಈ ಹಂತದಲ್ಲಿ ಕೊಡಗಿನ ನೂತನ ತಾಲ್ಲೂಕು ರಚನೆಯ ಬಗ್ಗೆ ಯಾವುದೇ ಪ್ರಸ್ತಾವನೆಗಳು ಇರಲಿಲ್ಲವೆಂದು ಡಾ.ಪರಮೇಶ್ವರ್ ಸ್ಪಷ್ಟಪಡಿಸಿದರು. ಇದೀಗ ತಾಲ್ಲೂಕಿಗಾಗಿ ಹೋರಾಟಗಳನ್ನ ನಡೆಸಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News