×
Ad

ಆಂಗ್ಲ ಭಾಷೆ ಬಲ್ಲವರಷ್ಟೇ ಬುದ್ಧಿವಂತರಲ್ಲ: ಡಾ.ಮನುಬಳಿಗಾರ್

Update: 2017-11-01 20:27 IST

ಬೆಂಗಳೂರು, ನ.1: ಆಂಗ್ಲದಲ್ಲಿ ಮಾತನಾಡಿದರೆ ಮಾತ್ರ ಬುದ್ಧಿವಂತರು ಎಂಬ ಸಂಕುಚಿತ ಮನೋಭಾವದಿಂದ ಹೊರ ಬಂದು, ಕನ್ನಡತನವನ್ನು ಅಳವಡಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನುಬಳಿಗಾರ್ ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್‌ನಿಂದ ಹಮ್ಮಿಕೊಂಡಿದ್ದ ಡಿಎಸ್ ಮ್ಯಾಕ್ಸ್ ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ ಸಾಹಿತ್ಯ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಂಗ್ಲ ಎಂಬುದು ಮಾತ್ರ ಶ್ರೇಷ್ಠವಲ್ಲ. ಕನ್ನಡಿಗರು ಅಕ್ಷರ ಇಲ್ಲದಿದ್ದಾಗಲೇ ಕಾವ್ಯವನ್ನು ಕಟ್ಟಿದ್ದಾರೆ. ಇದನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು ಹಾಗೂ ಕನ್ನಡವನ್ನು ಉಳಿಸಿ-ಬೆಳೆಸಲು ಮುಂದಾಗಬೇಕು ಎಂದು ತಿಳಿಸಿದರು.

ಬ್ರಿಟಿಷರು ಭಾರತದಿಂದ ಹೊರ ನಡೆದರೂ ಇಂಗ್ಲಿಷ್ ಮಾತನಾಡುವ ರೋಗ ಹೋಗಿಲ್ಲ. ಆಂಗ್ಲ ಮಾತನಾಡುವುದು ವ್ಯಸನವಾಗಿದೆ ಎಂದ ಅವರು, ರಾಜ್ಯದ ಇತರೆ ಕಡೆಗಳಿಗಿಂತ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆಗೆ ಕಂಟಕ ಒದಗಿ ಬಂದಿದೆ. ಈ ಸಂದರ್ಭದಲ್ಲಿ ಎಲ್ಲರ ಮನೆಯಲ್ಲಿ ಕನ್ನಡ ಮಾತನಾಡುವ ಪರಿಪಾಠವನ್ನು ಅನುಸರಿಸುವ ಮೂಲಕ ಬೆಂಗಳೂರಿಗೆ ಒದಗಿರುವ ಕಂಟಕವನ್ನು ತೊಲಗಿಸಬೇಕು ಎಂದು ಹೇಳಿದರು.

ಮಾತೃ ಭಾಷೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದು, ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಸುವುದು, ಕಡ್ಡಾಯ ಕನ್ನಡ ಕಲಿಸುವುದು ಸೇರಿದಂತೆ ಅನೇಕ ಕನ್ನಡವನ್ನು ಉಳಿಸುವ ಸಲುವಾಗಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಕನ್ನಡ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿರಬೇಕು. ಕೇವಲ ನವೆಂಬರ್‌ನಲ್ಲಿ ಮಾತ್ರ ಕನ್ನಡವನ್ನು ನೆನಪಿಸಿಕೊಳ್ಳುವಂತಾಗಬಾರದು ಎಂದರು.

ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ದಾವಡೆಗೆರೆ ಮಠದ ನಟರಾಜ ಸ್ವಾಮೀಜಿಗೆ ಡಿಎಸ್ ಮ್ಯಾಕ್ಸ್ ಪುರಸ್ಕಾರ ಹಾಗೂ ಸಾಹಿತಿಗಳಾದ ಡಾ.ಬಸವರಾಜ ಕಲ್ಗುಡಿ, ಅಗ್ರಹಾರ ಕೃಷ್ಣಮೂರ್ತಿ, ಡಾ.ಡಿ.ವಿ.ರಾಜಶೇಖರಪ್ಪ, ಡಾ.ಶಾಂತ ಕುಮಾರಿ ಇಂಬ್ರಾಪುರ ಮತ್ತು ಡಾ.ಜಯಶ್ರೀ ದಂಡೆ ಅವರಿಗೆ ಡಿಎಸ್ ಮ್ಯಾಕ್ಸ್ ಸಾಹಿತ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 ಕಾರ್ಯಕ್ರಮಕ್ಕೂ ಮೊದಲು ಧ್ವಜಾರೋಹಣ ಹಮ್ಮಿಕೊಳ್ಳಲಾಗಿತ್ತು. ಅನಂತರ ಭುವನೇಶ್ವರಿಯ ಹಾಗೂ 350 ಅಡಿ ಉದ್ದದ ಕನ್ನಡ ಧ್ವಜವನ್ನು ನಾಗವಾರ ರಿಂಗ್‌ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಕೆ.ವಿ.ಸತೀಶ್, ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪಿ.ದಯಾನಂದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News