×
Ad

ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ: ಎಂ.ಬಿ.ಪಾಟೀಲ್

Update: 2017-11-01 20:50 IST

ವಿಜಯಪುರ, ನ.1: ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲೆ ಎದುರಿಸುತ್ತೇವೆ. ಅವರೇ ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಾ.ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತನಗೂ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿದೆ. ಆದರೆ, ಅದಕ್ಕಾಗಿ ಯಾವುದೆ ರೀತಿಯಲ್ಲಿ ಗಡಿಬಿಡಿ ಅಥವಾ ದುರಾಸೆಯಿಲ್ಲ. ಸದ್ಯಕ್ಕೆ ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ. ಅವರ ಪಾಳಿ ಮುಗಿದ ಮೇಲೆ ನಾವು ಮುಖ್ಯಮಂತ್ರಿಯಾಗಬಹುದು ಎಂದರು.

ಕನ್ನಡಕ್ಕೆ ಪ್ರತ್ಯೇಕ ಧ್ವಜ ಇರಬೇಕೆಂಬುದು ತಪ್ಪಲ್ಲ. ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅಲ್ಲಿನ ರಾಜ್ಯಗಳಿಗೆ ಪ್ರತ್ಯೇಕವಾದ ಧ್ವಜಗಳಿವೆ. ಅದರಂತೆಯೆ, ಕನ್ನಡಕ್ಕೂ ಪ್ರತ್ಯೇಕ ಧ್ವಜ ಇರಬೇಕೆಂಬ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಭೀಮಾ ತೀರದ ಹಂತಕ ಧರ್ಮರಾಜ ಚಡಚಣ ಎನ್‌ಕೌಂಟರ್ ಪ್ರಕರಣಕ್ಕೂ, ರಾಜ್ಯ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಧರ್ಮರಾಜ ಚಡಚಣ ಕುಟುಂಬದವರು ಮಾಡಿರುವ ಆರೋಪಕ್ಕೆ ಸಂಬಂಧವೇ ಇಲ್ಲ. ಇದು ನಕಲಿ ಎನ್‌ಕೌಂಟರ್ ಅಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ರಾಜು ಆಲಗೂರ, ಡಾ.ಮಕ್ಬೂಲ್ ಬಾಗವಾನ್, ವಿಜಯಪುರ ಜಿಲ್ಲಾಧಿಕಾರಿ ಶಿವಕುಮಾರ ಕೆ.ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‌ಕುಮಾರ್ ಜೈನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶ್‌ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News