ಚುನಾವಣಾ ಆಯೋಗದ ನಿಲುವು ಸ್ವಾಗತಾರ್ಹ: ಮುಖ್ಯಮಂತ್ರಿ
ಬೆಂಗಳೂರು, ನ.1: ಅಪರಾಧ ಹಿನ್ನೆಲೆಯುಳ್ಳವರು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧ ಹೇರುವಂತೆ ಸುಪ್ರೀಂಕೋರ್ಟ್‌ಗೆ ಭಾರತೀಯ ಚುನಾವಣಾ ಆಯೋಗ ಪ್ರಮಾಣಪತ್ರ ಸಲ್ಲಿಸಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧ ಹಿನ್ನೆಲೆಯುಳ್ಳವರು ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧ ಹೇರಬೇಕೆಂಬ ಚುನಾವಣಾ ಆಯೋಗದ ನಿರ್ಧಾರ ಬಹಳ ಒಳ್ಳೆಯದು ಎಂದರು.
ಕೇವಲ ಕ್ರಿಮಿನಲ್ ಹಿನ್ನೆಲೆಯಷ್ಟೇ ಅಲ್ಲ, ಎಫ್‌ಐಆರ್ ದಾಖಲಾಗಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಹಾಗಾದರೆ ಮಾತ್ರ ಯಡಿಯೂರಪ್ಪ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಸಂಸದ ವೀರಪ್ಪಮೊಯ್ಲಿ ಮಾತನಾಡಿ, ಅಪರಾಧ ಹಿನ್ನೆಲೆಯ ಆರೋಪ ಎದುರಿಸುತ್ತಿರುವವರಿಗೂ ಅವಕಾಶ ನೀಡಬಾರದು. ಈ ಬಗ್ಗೆ ಯುಪಿಎ ಸರಕಾರದ ಅವಧಿಯಲ್ಲಿ ಮಸೂದೆ ತರಲು ಪ್ರಯತ್ನ ಮಾಡಲಾಗಿತ್ತು. ಈಗಿನ ಎನ್‌ಡಿಎ ಸರಕಾರ ಮಸೂದೆ ಮಂಡಿಸಲು ಕ್ರಮ ಕೈಗೊಳ್ಳಲಿ. ಈ ಸಂಬಂಧ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದರು.