ಮೈಸೂರು : ಕನ್ನಡ ರಾಜ್ಯೋತ್ಸವ ಆಚರಣೆ
ಮೈಸೂರು,ನ.1: ವ್ಯಾವಹಾರಿಕವಾಗಿ ಕನ್ನಡ ಬಳಕೆ ಹೆಚ್ಚಾದರೆ ಕನ್ನಡ ಭಾಷೆ ಬೆಳೆಯುತ್ತದೆ ಎಂದು ಮೈಸೂರು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾಗಿದ್ದ 62ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ನಗರದ ಕಲಾಮಂದಿರದಲ್ಲಿ ಬುಧವಾರ ಭುವನೇಶ್ವರಿ ದೇವಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಸವಾಂಗೀಣ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ನಮ್ಮ ರಾಜ್ಯ ಇತಿಹಾಸ ಹಿಂದಿನಿಂದಲೂ ಸಮಾನತೆ ಹಾಗೂ ಸಾಮರಸ್ಯ ಬದುಕನ್ನು ಕಲ್ಪಿಸುವ ನಾಡಾಗಿ ಹೆಸರು ಪಡೆದಿದೆ. ವ್ಯವಹಾರಿಕವಾಗಿ ಕನ್ನಡದ ಬಳಕೆ ಆದರೆ ಕನ್ನಡ ಭಾಷೆ ಬೆಳೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಅಗಲಿದ ಜಿಲ್ಲೆಯ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಚಿಕ್ಕಮಾದು ಅವರಿಗೆ ಶ್ರದ್ಧಾಂಜಲಿ ಸಲ್ಲಿಲಾಯಿತು.
ಇದಕ್ಕೂ ಮುನ್ನ ನಗರದ ಕೋಟೆ ಆಂಜನೇಯ ದೇವಾಲಯದ ಆವರಣದಲ್ಲಿ ಭುವನೇಶ್ವರಿದ ದೇವಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಸಚಿವರು ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜಕ್ಕೆ ವಂದನೆ ಸಲ್ಲಿಸಿದರು. ಅರಮನೆ ಆವರಣದಿಂದ ಭುವನೇಶ್ವರಿ ತಾಯಿ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಜಾನಪದ ಕಲಾತಂಡಗಳ ಆಕರ್ಷಕ ಮೆರವಣಿಗೆಯೊಂದಿಗೆ ದೇವರಾಜ ಅರಸು ರಸ್ತೆಯ ಮೂಲಕ ಕಲಾಮಂದಿರಕ್ಕೆ ಬರಲಾಯಿತು.
ಮಲ್ಲಿಗೆ ನಗರಿ ತುಂಬೆಲ್ಲಾ ಆಟೋ ಚಾಲಕರು, ಬಸ್ ಮಾಲೀಕರ ಸಂಘ, ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಸೇರಿದಂತೆ ವಿವಿಧ ಕನ್ನಡ ಸಂಘಗಳವರು 62ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ, ಶಾಸಕ ಎಂ.ಕೆ.ಸೋಮಶೇಖರ್, ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರ ರಾವ್, ಮೇಯರ್ ಎಂ.ಜೆ.ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.