×
Ad

ರಾಜ್ಯದ ಬೆಳವಣಿಗೆಗೆ ಮಂಡ್ಯದ ಮಣ್ಣಿನ ಮಕ್ಕಳ ಕೊಡುಗೆ ಅಪಾರ : ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ

Update: 2017-11-01 22:28 IST

ಮಂಡ್ಯ, ನ.1: ಕರ್ನಾಟಕದ ಬೆಳವಣಿಗೆಯಲ್ಲಿ  ಮಂಡ್ಯದ ಮಣ್ಣಿನ ಮಕ್ಕಳ ಕೊಡುಗೆ ಮಹತ್ತರ ಪಾತ್ರವಹಿಸಿದೆ. 1845ರಲ್ಲೇ ಶ್ರೀರಂಗಪಟ್ಟಣದ ಬಳಿ ಅಷ್ಟಗ್ರಾಮ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಹೇಳಿದ್ದಾರೆ.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ 62ನೆ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಂದೇಶ ನೀಡಿದ ಅವರು, ಏಷ್ಯಾ ಖಂಡದಲ್ಲೇ ಮೊದಲು ವಿದ್ಯುತ್ ಉತ್ಪಾದನಯಾದದ್ದು ಜಿಲ್ಲೆಯ ಶಿವನಸಮುದ್ರದಲ್ಲಿ ಎಂದರು.

ಕನ್ನಡದ ಮೊಟ್ಟಮೊದಲ ನಾಟಕ ಮಿತ್ರಾವಿಂದ ಗೋವಿಂದ ಬರೆದವರು ಶ್ರೀರಂಗಪಟ್ಟಣದ ಚಿಕ್ಕದೇವರಾಜ ಒಡೆಯರ್‍ರವರ ಆಸ್ಥಾನ ಕವಿ ಸಿಂಗರಾರ್ಯ. ಈ ಪರಂಪರೆಯನ್ನು ದೇಶಹಳ್ಳಿ ಶ್ರೀಕಂಠೇಶಗೌಡ, ಕನ್ನಡದ ಕಣ್ವ ಬಿ.ಎಂ.ಶ್ರೀ., ಪು.ತಿ.ನ., ಎ.ಎನ್. ಮೂರ್ತಿರಾವ್, ಅಕ್ಕಿಹೆಬ್ಬಾಳಿನ ಕಲಾಮಂದಿರ ಸುಬ್ಬರಾಯರು, ಎ.ಎಸ್.ಮೂರ್ತಿ, ಕೆ.ವಿ.ಶಂಕರಗೌಡ, ಸಿ.ಜಿ.ಕೃಷ್ಣಸ್ವಾಮಿ, ಹರವು ಯೋಗಾನರಸಿಂಹ, ಮಳವಳ್ಳಿ ಸುಬ್ಬಣ್ಣ, ಮಳವಳ್ಳಿ ಸುಂದರಮ್ಮ, ಮೊದಲಾದವರೆಲ್ಲ ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂಧು ಅವರು ಸ್ಮರಿಸಿದರು. 

ಮಂಡ್ಯದ ಬೆಲ್ಲ, ಬೆಣ್ಣೆ, ಮದ್ದೂರಿನ ಎಳನೀರು ದೇಶದ ವಿವಿಧೆಡೆ ಮಾರಾಟವಾಗುವುದಲ್ಲದೆ, ವಿದೇಶಗಳಿಗೂ ರಫ್ತಾಗುತ್ತದೆ. ಕಾವೇರಿ, ಹೇಮಾವತಿ, ಶಿಂಷಾ, ಲೋಕಪಾವನಿ, ವೀರ ವೈಷ್ಣವಿ ನದಿಗಳು, ಎತ್ತರೆತ್ತರ ನಿಂತಿರುವ ಬೆಟ್ಟಗಳು, ಪ್ರಾಚೀನ ದೇವಾಲಯಗಳು, ನದಿತಟಾಕುಗಳು ಈ ಜಿಲ್ಲೆಯನ್ನು ಶ್ರೀಮಂತಗೊಳಿಸಿವೆ ಮತ್ತು ಕನ್ನಡ ನೆಲವನ್ನು ಸಮೃದ್ಧಿಗೊಳಿಸಿವೆ ಎಂದು ಅವರು ತಿಳಿಸಿದರು.

ಆದಿಚುಂಚನಗಿರಿಯ ಕಾಲಭೈರವ, ಮಂಡ್ಯದ ಲಕ್ಷ್ಮೀಜನಾರ್ಧನ, ಮದ್ದೂರಿನ ಉಗ್ರನರಸಿಂಹ, ಶ್ರೀರಂಗಪಟ್ಟಣದ ರಂಗನಾಥ, ಮೇಲುಕೋಟೆಯ ಚೆಲುವನಾರಾಯಣ, ಪಾಂಡವಪುರದ ಉಕ್ಕಡದಮ್ಮ ಮೊದಲಾದ ದೇವಾನುದೇವತೆಗಳು ನಮಗೆ ಶ್ರೀರಕ್ಷೆಯಾಗಿದ್ದಾರೆ ಎಂದು ಸಚಿವರು ಪ್ರಸ್ತಾಪಿಸಿದರು.
ವರುಣನ ಕೃಪೆಯಿಂದ ತಡವಾದರೂ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದ್ದು, ಕನ್ನಂಬಾಡಿಗೆ 114 ಅಡಿ ನೀರು ಬಂದಿದೆ. ಸರಕಾರದ ದಿಟ್ಟ ಕ್ರಮದಿಂದ ರೈತರ ಹೊಲಗಳಲ್ಲಿ ಬೆಳೆದು ನಿಂತಿದ್ದ ಬೆಳೆಗಳಿಗೆ ನೀರು ಹರಿಸಲಾಗಿದ್ದು, ರೈತರ ಬಾಳಿಗೆ ನೆಮ್ಮದಿ ನೀಡಿದೆ ಎಂದು ಅವರು ಹೇಳಿಕೊಂಡರು.

ನೀರಿನ ವ್ಯರ್ಥ ಬಳಕೆಯನ್ನು ತಪ್ಪಿಸಲು ವಿವಿಧ ಇಲಾಖೆಗಳ ಸಹಕಾರದಲ್ಲಿ ಎಲ್ಲ ಹೋಬಳಿಗಳಲ್ಲಿ ಅಧಿಕಾರಿಗಳು ಹಾಗು ಸಿಬ್ಬಂದಿಗಳ ತಂಡಗಳನ್ನು ರಚನೆ ಮಾಡಿ, ಕೆರೆಕಟ್ಟೆಗಳನ್ನು ಆದ್ಯತೆಯ ಮೇಲೆ ತುಂಬಿಸಲಾಯಿತು. ಇದರಿಂದ ಬೆಳೆದು ನಿಂತಿದ್ದ ಬೆಳೆಗಳಿಗೆ ನೀರು ಒದಗಿಸಿದ್ದಲ್ಲದೆ, ಕುಡಿಯುವ ನೀರಿನ ಮೂಲವನ್ನು ಕಾಪಾಡುವುದಲ್ಲದೆ ಅಂತರ್ಜಲ ಮಟ್ಟವನ್ನೂ ಸಹ ವೃದ್ಧಿಸಿದಂತಾಗಿದೆ ಎಂದು ಅವರು ವಿವರಿಸಿದರು.

ಕ್ರಾಂತಿಕಾರಕ ಯೋಜನೆಯಾದ ಅನ್ನಭಾಗ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿಯಾಗಿದೆ. 4.46 ಲಕ್ಷ ಬಿಪಿಎಲ್ ಹಾಗು 40,000 ಎಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತವಾಗಿ 35 ಕೆ.ಜಿ. ಅಕ್ಕಿ, ಬಿ.ಪಿ.ಎಲ್. ಪಡಿತರ ಚೀಟಿದಾರರಿಗೆ ಸದಸ್ಯರ ಮಿತಿ ಇಲ್ಲದೆ ಪ್ರತಿ ಸದಸ್ಯರಿಗೆ 7 ಕೆ.ಜಿ ಅಕ್ಕಿ ಹಾಗು ಪ್ರತೀ ಪಡಿತರ ಚೀಟಿಗೆ 38 ರೂ. ದರದಲ್ಲಿ 1 ಕೆ.ಜಿ. ಬೇಳೆ ವಿತರಣೆ ಮಾಡಲಾಗುತ್ತಿದೆ ಎಂದರು.

ಸಹಕಾರ ಸಂಘಗಳ ಸಾಲಮನ್ನಾ ಯೋಜನೆಯಿಂದ ಜಿಲ್ಲೆಯ 1.16 ಲಕ್ಷ ರೈತರ 429 ಕೋಟಿ ರೂ. ಬೆಳೆ ಸಾಲ ಮನ್ನಾ ಮಾಡಲಾಗಿದೆ. 1.45 ಲಕ್ಷ ರೈತರಿಗೆ 80 ಕೋಟಿ ರೂ. ಮುಂಗಾರು ಬೆಳೆ ನಷ್ಟ ಪರಿಹಾರ ಮತ್ತು 42 ಸಾವಿರ ರೈತ ಫಲಾನುಭವಿಗಳಿಗೆ 15.50 ಕೋಟಿ ರೂ. ಹಿಂಗಾರು ಬೆಳೆ ನಷ್ಟ ಪರಿಹಾರ ನೀಡಲಾಗಿದೆ ಎಂದು ಅಂಕಿ ಅಂಶ ನೀಡಿದರು.

ವಸತಿ ಯೋಜನೆಯಲ್ಲಿ ಶೇ.80.29ರಷ್ಟು ಪ್ರಗತಿ ಸಾಧಿಸಲಾಗಿದ್ದು, ಜಿಲ್ಲೆಯು ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ. 2016-17ನೆ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 12,136 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 139 ನಿವೇಶನಗಳನ್ನು ಹಂಚಲಾಗಿದೆ. ಇಂದಿರಾ ಗ್ರಾಮೀಣ ಆಶ್ರಯ ನಿವೇಶನಗಳ ಯೋಜನೆಯಡಿ 56 ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರಗಳನ್ನು ಹಂಚಲು ಕ್ರಮ ವಹಿಸಲಾಗಿದೆ.
ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿದ್ದು, ಎಲ್ಲ 234 ಗ್ರಾಮ ಪಂಚಾಯತ್‍ಗಳು 2012ರ ಬೇಸ್‍ಲೈನ್ ಸಮೀಕ್ಷೆಯಲ್ಲಿ ಗುರುತಿಸಿದ ಎಲ್ಲ ಕುಟುಂಬಗಳಿಗೂ ವೈಯಕ್ತಿಕ ಗೃಹ ಶೌಚಾಲಯ ಕಲ್ಪಿಸುವ ಮೂಲಕ ಶೇ.100ರಷ್ಠು ಸಾಧನೆ ಮಾಡಿದೆ ಎಂದು ಅವರು ತಿಳಿಸಿದರು.

ನಗರಸಭಾಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಎಸ್ಪಿ ಜಿ.ರಾಧಿಕಾ, ಇತರ ಗಣ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News