ಎಂಇಎಸ್ ಕರಾಳ ದಿನದಲ್ಲಿ ಮೇಯರ್ ಸಂಜೋತಾ ಭಾಗಿ

Update: 2017-11-01 17:16 GMT

ಬೆಂಗಳೂರು, ನ.1: ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನವೆಂಬರ್ 1ರಂದು ಕರಾಳ ದಿನಾಚರಣೆ ಆಚರಿಸಿ, ಜಾಥಾ ಹಮ್ಮಿಕೊಂಡಿತ್ತು. ಕರಾಳ ದಿನದಲ್ಲಿ ಮೇಯರ್ ಸಂಜೋತಾ ಬಾಂದೇಕರ್ ಭಾಗಿಾಗಿ ನಾಡದ್ರೋಹಿ ಕೃತ್ಯ ಎಸಗಿದ್ದಾರೆ.

ಕರ್ನಾಟಕ ಸರಕಾರ, ಕನ್ನಡಿಗರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡದಂತೆ, ಘೋಷಣೆ ಕೂಗದಂತೆ ಹಲವು ಷರತ್ತುಗಳನ್ನು ವಿಧಿಸಿ ಕರಾಳ ದಿನ ಆಚರಣೆ ಮಾಡಲು ಬೆಳಗಾವಿ ಪೊಲೀಸರು ಅನುಮತಿ ನೀಡಿದ್ದರು.

ಶಾಸಕ ಸಂಭಾಜಿ ಪಾಟೀಲ ಸೇರಿ ಪಾಲಿಕೆ, ತಾಪಂ, ಜಿಪಂ ಸದಸ್ಯರು ಕರಾಳ ದಿನದಲ್ಲಿ ಪಾಲ್ಗೊಂಡಿದ್ದರು. ಬಾಯಿಗೆ ಪಟ್ಟಿ ಕಟ್ಟಿಕೊಂಡು ಮೇಯರ್ ಸಂಜೋತಾ ಕರಾಳ ದಿನದ ಜಾಥದಲ್ಲಿ ಭಾಗಿಯಾಗಿ ಕನ್ನಡ ವಿರೋಧಿ ನಿಲುವನ್ನು ತೋರಿಸಿದರು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಮರಾಠಿಗರನ್ನು ಒಟ್ಟುಗೂಡಿಸಲು ವಿಫಲರಾದ ಹಿನ್ನಲೆಯಲ್ಲಿ ಕರಾಳ ದಿನಾಚರಣೆ ನೀರಸವಾಗಿತ್ತು.

ನಗರದ ಧರ್ಮವೀರ ಸಂಭಾಜಿ ಮೈದಾನದಿಂದ ಕರಾಳ ದಿನ ಜಾಥಾ ಆಯೋಜಿಸಲಾಗಿತ್ತು. ಜಾಥ ಹಿನ್ನೆಲೆಯಲ್ಲಿ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಮರಾಠಿ ಸಮುದಾದಯವರು, ಎಂಇಎಸ್ ಬೆಂಬಲಿಗರು ಸೇರಲಿಲ್ಲ.

ಎಂಇಎಸ್‌ನ ಭಿನ್ನಮತದಿಂದಾಗಿ ಮರಾಠಿಗರಲ್ಲಿ ಈಗ ಒಗ್ಗಟ್ಟು ಇಲ್ಲದಂತಾಗಿದೆ. ಶಾಸಕ ಸಂಭಾಜಿ ಪಾಟೀಲ್, ಕಿರಣ ಠಾಕೂರ್ ಮತ್ತು ಮನೋಹರ ಕಿಣೆಕರ್ ಬಣಗಳಿಂದ ಪ್ರತ್ಯೇಕ ಜಾಥ ನಡೆಸಿದ್ದು ಕಂಡು ಬಂದಿದೆ.

11 ಕಠಿಣ ಷರತ್ತುಗಳನ್ನು ವಿಧಿಸಿ ಪೊಲೀಸರು ಜಾಥಾಗೆ ಅನುಮತಿ ನೀಡಿದ್ದರು. ಇದಕ್ಕೂ ಮುನ್ನ ನಾಡದ್ರೋಹಿ ಸಂಘಟನೆಯ ಕೆಲ ಯುವಕರು ಮರಾಠಿ ಭಾಷೆಯಲ್ಲಿ ಬ್ಯಾನರ್ ಒಂದನ್ನು ತಯಾರಿಸಿದ್ದು ಅದರಲ್ಲಿ ಮುಗ್ಧ ಮರಾಠಿಗರನ್ನ ಪ್ರಚೋದಿಸಿ, ಕನ್ನಡಿಗರನ್ನ ಕೆರಳಿಸುವಂತ ಸಂದೇಶವನ್ನ ಸಾರುವ ಮೂಲಕ ಮತ್ತೆ ಬೆಳಗಾವಿಯಲ್ಲಿ ಭಾಷಾ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾರೆ. ನಾಡದ್ರೋಹಿಗಳ ಈ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕನ್ನಡಿಗರ ಆಕ್ರೋಶ ಕನ್ನಡ ರಾಜ್ಯೋತ್ಸವದ ದಿನದಂದು ಮತ್ತೆ ನಾಡದ್ರೋಹಿಗಳ ಕರಾಳ ಆಚರಿಸಲು ಅನುಮತಿ ನೀಡಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. ನಾಡು, ನುಡಿಗೆ ರಾಜ್ಯ ಸರಕಾರ ಬದ್ಧವಾಗಿಲ್ಲ ಎಂಬುದಕ್ಕೆ ಮತ್ತೆ ಎಂಇಎಸ್ ಪುಂಡರಿಗೆ ಸೊಪ್ಪು ಹಾಕಿರುವುದೆ ಸಾಕ್ಷಿ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಜಾನೆ ಬೆಳಗಾವಿ ಪಾಲಿಕೆಯ ಮೇಲೆ ಕನ್ನಡ ಬಾವುಟ ಹಾರಿಸಿದ್ದಾರೆ. ನಂತರ ಬಾವುಟವನ್ನು ತೆಗೆದು ಹಾಕಿದ್ದು ಮತ್ತೆ ಪರಿಸ್ಥಿತಿ ಹದಗೆಡುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News