×
Ad

ಚಿಕ್ಕಬಳ್ಳಾಪುರ: ಕನ್ನಡ ರಾಜ್ಯೋತ್ಸವ ಆಚರಣೆ

Update: 2017-11-01 23:33 IST

ಚಿಕ್ಕಬಳ್ಳಾಪುರ,ನ.1: ಕರ್ನಾಟಕದ ಏಕೀಕರಣಕ್ಕಾಗಿ ನಡೆದ ಹೋರಾಟದ ಕುರಿತು ಯುವ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.

ನಗರದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 62ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರ ಅಧಿಕಾರಾವಧಿಯಲ್ಲಿ ಹರಿದು ಹಂಚಿ ಹೋಗಿದ್ದ ರಾಜ್ಯದ ಏಕೀಕರಣದ ಕನಸಿನೊಂದಿಗೆ ಡೆಪ್ಯೂಟಿ ಚೆನ್ನಬಸಪ್ಪನವರು 1865ರಲ್ಲಿ ಚಾಲನೆ ನೀಡಿದ ಏಕೀಕರಣ ಚಳುವಳಿ ಒಂದು ನೂರು ವರ್ಷಗಳವರೆಗೆ ನಿರಂತರವಾಗಿ ನಡೆಯಿತು. ಅಂದು ಅವರು ಕಂಡ ಕನಸಿನ ಫಲವೇ ಇಂದು ನಾವು ಕಾಣುತ್ತಿರುವ ಅಖಂಡ ಕರ್ನಾಟಕ ರಾಜ್ಯವಾಗಿ ರೂಪುಗೊಳ್ಳಲು ಕಾರಣವಾಗಿದೆ ಎಂದರು.

ಕರ್ನಾಟಕ ರಾಜ್ಯ ಏಕೀಕರಣ ಹೋರಾಟದಲ್ಲಿ ಅನೇಕ ಮಹನೀಯರ ಶ್ರಮ ಅಡಗಿದ್ದು, ಆಲೂರು ವೆಂಕಟರಾಯ, ಆಚಾರ್ಯ ಬಿ.ಎಂ. ಶ್ರೀಕಂಠಯ್ಯ, ಅ.ನ. ಕೃಷ್ಣರಾಯ, ಮಂಗಳವೇಡೆ ಶ್ರೀನಿವಾಸರಾಯ, ಎಸ್. ನಿಜಲಿಂಗಪ್ಪ, ಕೆ.ಎಫ್. ಪಾಟೀಲ, ಗೋರೂರು ರಾಮಸ್ವಾಮಿ ಅಯ್ಯಂಗಾರ, ಕಡಿದಾಳ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಎಚ್.ಎಸ್. ದೊರೆಸ್ವಾಮಿ, ಬಳ್ಳಾರಿ ಸಿದ್ದಮ್ಮ, ಪಾಟೀಲ ಪುಟ್ಟಪ್ಪ ಸೇರಿದಂತೆ ಅನೇಕ ಲೇಖಕರು, ಸಂಘ ಸಂಸ್ಥೆಗಳು, ಕನ್ನಡ ಪತ್ರಿಕೋದ್ಯಮ ಹಾಗೂ ಹೋರಾಟಗಾರರ ಕೊಡುಗೆಯ ಬಗ್ಗೆ ಇಂದಿನ ಯುವ ಜನತೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಂಪರೆಯ ಅಭಿವೃದ್ಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಮಂಕುತಿಮ್ಮನ ಕಗ್ಗ ಖ್ಯಾತಿಯ ಡಿ.ವಿ. ಗುಂಡಪ್ಪ, ಕೈವಾರ ನಾರಾಯಣಪ್ಪ, ಗೂಳೂರಿನ ಜಚನಿ, ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಇಡಗೂರು ರುದ್ರಕವಿ, ಬಸವಾರಾಧ್ಯ, ಹಂಪನಾಗರಾಜಯ್ಯ, ಕಮಲಾ ಹಂಪನಾ, ತೇವಾಶರ್ಮ, ಆಧುನಿಕ ವಚನಗಳನ್ನು ರಚಿಸಿದ ಡಾ. ಜಚನಿ, ಪತ್ರಿಕೋದ್ಯಮದ ಭೀಷ್ಮ ತಿ.ತಾ. ಶರ್ಮ, ಡಾ.ಎಚ್. ನರಸಿಂಹಯ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತನ್ನು ಹುಟ್ಟು ಹಾಕಿದ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರು ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದು, ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಈ ಎಲ್ಲ ಮಹನೀಯರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ಅ.2 ರವರೆಗೆ ಜಿಲ್ಲೆಯಲ್ಲಿ 55 ಗ್ರಾಪಂಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಪಂಗಳನ್ನಾಗಿ ಘೋಷಿಸಲಾಗಿದೆ. ಈಗಾಗಲೇ ಗುಡಿಬಂಡೆ ತಾಲೂಕು, ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎಂಬುದಾಗಿ ಘೋಷಿಸಿದ್ದು, ರಾಜ್ಯೋತ್ಸವದಲ್ಲಿ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲೂಕುಗಳನ್ನು ಬಯಲು ಬಹಿರ್ದೆಸೆ ಮುಕ್ತ ಶೌಚಾಲಯ ತಾಲೂಕುಗಳನ್ನಾಗಿ ಘೋಷಿಸಿದ ಅವರು, ಜಿಲ್ಲೆಯ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆ ಮಾಡಲು ಪೂರ್ಣ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗುಡಿಬಂಡೆಯ ನರಸಿಂಹಮೂರ್ತಿ, ಭಕ್ತರಹಳ್ಳಿಯ ಜಾನಪದ ಕಲಾವಿದ ಬಿ, ಶಿವಕುಮಾರ್, ಹಿರೆಕಟ್ಟಿಗೇನಹಳ್ಳಿ ಕೆ.ಎನ್. ಕಲ್ಯಾಣ್‍ಕುಮಾರ್, ಚಿಕ್ಕಬಳ್ಳಾಪುರ ವೈ.ಆರ್. ಸತ್ಯನಾರಾಯಣರಾವ್, ವೀರಂಡಹಳ್ಳಿ ಎನ್. ರಾಮಕೃಷ್ಣಪ್ಪ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಎಂ. ವೀರಪ್ಪ ಮೊಯಿಲಿ, ಶಾಸಕ ಡಾ.ಕೆ. ಸುಧಾಕರ್, ಜಿಪಂ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ, ಜಿಪಂ ಉಪಕಾರ್ಯದರ್ಶಿ ಸಿದ್ಧರಾಮಯ್ಯ ಸೇರಿದಂತೆ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News