ಲಿಂಗಾಯತ ಧರ್ಮ ಪ್ರತ್ಯೇಕ ಸಾಂವಿಧಾನಿಕ ಮಾನ್ಯತೆಗೆ ಆಗ್ರಹ : ನ.19 ರಂದು ರಾಷ್ಟ್ರೀಯ ಬೃಹತ್ ಸಮಾವೇಶ
ಬೆಂಗಳೂರು, ನ.2: ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸಾಂವಿಧಾನಿಕ ಮಾನ್ಯತೆಗಾಗಿ ಒತ್ತಾಯಿಸಿ ನ.19ರಂದು ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಿಂಗಾಯತ ಸಮುದಾಯದ ರಾಷ್ಟ್ರೀಯ ಬೃಹತ್ ಸಮಾವೇಶ ನಡೆಸಲು ಲಿಂಗಾಯತ ಧರ್ಮ ಮಹಾಸಭಾ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಮುಖಂಡರಾದ ಡಾ.ಮಾತೆ ಮಹಾದೇವಿ, ಲಿಂಗಾಯತ ಒಂದು ಸ್ವತಂತ್ರ ಧರ್ಮವಾಗಿದ್ದು, ಒಂದು ಜಾತಿ, ಪಂಥಕ್ಕೆ ಸೇರುವುದಿಲ್ಲ. ಜೈನ, ಬೌದ್ಧ ಧರ್ಮಗಳಂತೆ ಲಿಂಗಾಯತ ಧರ್ಮಕ್ಕೂ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು. ಈ ಕುರಿತು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈಗಾಗಲೇ ಹಲವಾರು ಮಠಾಧೀಶರು, ಲಿಂಗಾಯತ ಮುಖಂಡರು ಮನವಿ ಸಲ್ಲಿಸಿದ್ದೇವೆ. ಆದರೆ, ಈ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನ ನಿಲುವನ್ನು ಪ್ರದರ್ಶಿಸಿ ಎಂದು ಸಿಎಂ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಲಿಂಗಾಯತ ಧರ್ಮ ಪ್ರಗತಿಪರವಾಗಿದ್ದು, ವೈಚಾರಿಕ ಧರ್ಮವಾಗಿದೆ. ಸಮಾನತೆಯನ್ನು ಬಯಸುತ್ತದೆ. ಈ ಧರ್ಮದ ತತ್ವ ಮತ್ತು ಆದರ್ಶಗಳು, ಸಿದ್ಧಾಂತಗಳು ವಿಶ್ವಕ್ಕೆ ಪ್ರಚಲಿತವಾಗಬೇಕು. ಈ ಧರ್ಮದಲ್ಲಿ ಎಲ್ಲಾ ಜಾತಿ, ವರ್ಗದ ಅನುಯಾಯಿಗಳಿದ್ದು, ಸುಮಾರು 73 ಉಪಜಾತಿಗಳು ಇದರಲ್ಲಿ ಸೇರ್ಪಡೆಯಾಗಿವೆ. ಹೀಗಾಗಿ, ಕೇಂದ್ರ ಸರಕಾರ ಅಲ್ಪಸಂಖ್ಯಾತರ ಸ್ಥಾನಮಾನ ನೀಡಿದಲ್ಲಿ ಈ ಎಲ್ಲಾ ವರ್ಗಗಳ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ದಾರಿ ತಪ್ಪಿಸದಿರಿ: ಅಖಿಲ ಭಾರತ ವೀರಶೈವ ಮಹಾಸಭಾ ವೀರಶೈವ-ಲಿಂಗಾಯತ ಎರಡೂ ಸೇರಿ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ದಾರಿ ತಪ್ಪಿಸುತ್ತಿದೆ. ಆದರೆ, ಲಿಂಗಾಯತ-ವೀರಶೈವ ಎರಡೂ ಒಂದಾಗಲು ಸಾಧ್ಯವಿಲ್ಲ. ವೀರಶೈವ ಎನ್ನುವುದು ಶೈವದ ಒಂದು ಪಂಥ. ವೀರಶೈವಕ್ಕೆ ಬೇಕಾದರೆ ಪ್ರತ್ಯೇಕ ಧರ್ಮ ನೀಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.
ಗೋಳಾಕಾರದ ಇಷ್ಟಲಿಂಗವನ್ನು ಆರಾಧಿಸುವವರು ಲಿಂಗಾಯಿತರು. ವೀರಶೈವರು ಬಸವಣ್ಣನವರನ್ನು ಧರ್ಮ ಗುರುವಾಗಿ, ವಚನ ಸಾಹಿತ್ಯವನ್ನು ಧರ್ಮಸಂಹಿತೆ ಎಂದು ಪರಿಗಣಿಸಲಿ. ಕನ್ನಡವನ್ನು ಧರ್ಮ ಭಾಷೆಯಾಗಿ ವೀರಶೈವರು ಒಪ್ಪಿಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ವೀರಶೈವರನ್ನು ಲಿಂಗಾಯತರಾಗಿ ಒಪ್ಪಿಕೊಳ್ಳುತ್ತೇವೆ ಎಂದು ಪ್ರತಿಪಾದಿಸಿದರು.
ನ.19 ರಂದು ನಡೆಯಲಿರುವ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ವಿವಿಧ ಮಠಗಳ ಧಾರ್ಮಿಕ ಮುಖಂಡರು, ಅನುಯಾಯಿಗಳು ಭಾಗವಹಿಸಲಿದ್ದು, ಬೇಲಿಮಠದ ಶಿವರುದ್ರ ಸ್ವಾಮೀಜಿಗಳ ಸಾನಿಧ್ಯ ವಹಿಸಲಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಉದ್ಘಾಟಿಸಲಿದ್ದು, ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್, ಪ್ರಗತಿಪರ ಚಿಂತಕರಾದ ಸಿ.ಎಸ್.ದ್ವಾರಕಾನಾಥ್, ಕೆ.ಎಂ.ನಟರಾಜ್, ರಿಪಬ್ಲಿಕನ್ ಪಾರ್ಟಿ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ 1995ರಲ್ಲಿ ಸ್ಥಾಪನೆಯಾದ ಲಿಂಗಾಯತ ಧರ್ಮ ಮಹಾಸಭಾ ಟ್ರಸ್ಟ್‌ನ 22ನೇ ವಾರ್ಷಿಕೋತ್ಸವವನ್ನು ಸಹ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
‘‘ಲಿಂಗಾಯತ-ವೀರಶೈವರು ಹಿಂದೂ ಧರ್ಮದ ಎರಡು ಸಂಪ್ರದಾಯಗಳಾಗಿದ್ದು, ಇವೆರಡೂ ಹಿಂದೂ ಧರ್ಮದಿಂದ ಬೇರೆಯಾಗಬಾರದು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ನೀಡಿರುವ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಲಿಂಗಾಯತ ಹಿಂದೂ ಧರ್ಮಕ್ಕಿಂತ ಭಿನ್ನವಾಗಿದೆ, ಹಿಂದೂ ಧರ್ಮದ ವೇದ, ಪುರಾಣ, ಶಾಸ್ತ್ರ, ಜ್ಯೋತಿಷ್ಯ ಇದ್ಯಾವುದನ್ನು ನಾವು ನಂಬುವುದಿಲ್ಲ. ಲಿಂಗಾಯತರಲ್ಲಿ ಅರಿವೇ ಗುರು ಎಂಬ ಅನುಭಾವವಿದೆ. ಹೀಗಾಗಿ, ಶ್ರೀಗಳು ಸಹ ನಮ್ಮ ಹೋರಾಟಕ್ಕೆ ಬೆಂಬಲಿಸಬೇಕು. ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು’’
-ಡಾ.ಮಾತೆ ಮಹಾದೇವಿ, ಲಿಂಗಾಯತ ಮಹಾಸಭಾದ ಮುಖಂಡೆ