×
Ad

10 ಸಾವಿರ ಮನೆಗಳ ನಿರ್ಮಾಣದ ಗುರಿ:ಭೈರತಿ ಬಸವರಾಜ

Update: 2017-11-02 19:23 IST

ಬೆಂಗಳೂರು, ನ.2: ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಡವರಿಗಾಗಿ 10 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಭೈರತಿ ಬಸವರಾಜ ತಿಳಿಸಿದ್ದಾರೆ.

ಗುರುವಾರ ನಗರದ ಭೈರತಿ ಗ್ರಾಮದಲ್ಲಿ 2016-17ನೆ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಸೇರಿದ 645 ಫಲಾನುಭವಿಗಳಿಗೆ ಒಂಟಿ ಮನೆಗಳ ನಿರ್ಮಾಣದ ಕಾರ್ಯಾದೇಶವನ್ನು ಹಸ್ತಾಂತರಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವೇಶನವಿದ್ದರೂ ಮನೆ ನಿರ್ಮಿಸಿಕೊಳ್ಳಲು ಆರ್ಥಿಕವಾಗಿ ಶಕ್ತರಲ್ಲದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಡವರನ್ನು ಗುರುತಿಸಿ ಸರಕಾರದ ವತಿಯಿಂದ ತಲಾ 4 ಲಕ್ಷ ರೂ.ಗಳ ಸಹಾಯಧನವನ್ನು 645 ಫಲಾನುಭವಿಗಳಿಗೆ ಇಂದು ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಶಾಸಕರ ಅನುದಾನದಡಿಯಲ್ಲಿ 15 ಕೋಟಿ ರೂ., ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ 10.80 ಕೋಟಿ ರೂ.ಗಳನ್ನು ಇದಕ್ಕಾಗಿ ಒದಗಿಸಲಾಗಿದೆ. ಫಲಾನುಭವಿಗಳು ತಮ್ಮ ಪಾಲಿನ ಹಣವನ್ನು ಸೇರಿಸಿ ಇನ್ನೆರಡು ಮೂರು ತಿಂಗಳಲ್ಲಿ ಉತ್ತಮಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಳ್ಳುವಂತೆ ಬಸವರಾಜ ಸಲಹೆ ನೀಡಿದರು.

ನಗರೇಶ್ವರ ನಾಗೇನಹಳ್ಳಿಯಲ್ಲಿ ಲಭ್ಯವಿರುವ 6 ಎಕರೆ 20 ಗುಂಟೆ ಜಾಗದಲ್ಲಿ 864 ಮನೆಗಳನ್ನು ನಿರ್ಮಿಸಿ ಅರ್ಹ ಬಡವರನ್ನು ಗುರುತಿಸಿ ಹಂಚಿಕೆ ಮಾಡಲಾಗುವುದು. ಅಲ್ಲದೆ, ಕ್ಯಾಲಸನಹಳ್ಳಿಯಲ್ಲಿ 9 ಎಕರೆ ಪ್ರದೇಶದಲ್ಲಿ 500-600 ನಿವೇಶನಗಳನ್ನು ರಚಿಸಿ ಆರ್ಥಿಕವಾಗಿ ಕೆಳಸ್ಥರದಲ್ಲಿರುವವರಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಪ್ರದಕ್ಷಿಣೆ ಸಂದರ್ಭದಲ್ಲಿ ಅಂಬೇಡ್ಕರ್ ನಗರದಲ್ಲಿ 200 ಮನೆಗಳನ್ನು ನಿರ್ಮಿಸಲು 10 ಕೋಟಿ ರೂ.ಅನುದಾನ ಒದಗಿಸುವುದಾಗಿ ಹೇಳಿದ್ದರು. ಜಿಲ್ಲಾಧಿಕಾರಿ ಗುರುತಿಸುವ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸುವ ಸಂಬಂಧ ವಸತಿ ಸಚಿವರ ಜತೆ ಚರ್ಚಿಸಿರುವುದಾಗಿ ಬಸವರಾಜ ತಿಳಿಸಿದರು.

ಕಳೆದ 17-18 ವರ್ಷಗಳಿಂದ ಬಡವರನ್ನು ಗುರುತಿಸಿ ಹಕ್ಕುಪತ್ರಗಳನ್ನು ನೀಡುವ ಕೆಲಸವಾಗಿರಲಿಲ್ಲ. ನಾನು ಶಾಸಕನಾಗಿ ಆಯ್ಕೆಯಾದ ನಂತರ 600 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡಿದ್ದೇನೆ. ಕ್ಷೇತ್ರದ 9 ವಾರ್ಡ್‌ಗಳಲ್ಲೂ ರಸ್ತೆ, ಚರಂಡಿ, ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಸಮಾನವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಸವರಾಜ ಹೇಳಿದರು.

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡಿರುವ 110 ಹಳ್ಳಿಗಳ ಪೈಕಿ 18 ಹಳ್ಳಿಗಳು ನಮ್ಮ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. 110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಕಾಮಗಾರಿಯು ಭರದಿಂದ ಸಾಗುತ್ತಿದೆ. ಅಲ್ಲದೆ, ಇತ್ತೀಚೆಗಷ್ಟೇ 1200 ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ಸೌಲಭ್ಯವನ್ನು ಕಲ್ಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ನಗರಾಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 15 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಎಂದು ತಾರತಮ್ಯಮಾಡದೆ ಇಡೀ ನಗರದ ಬೆಳವಣಿಗೆಗೆ ಪೂರಕವಾಗಿ ಅಭಿವೃದ್ಧಿಗೆ ಅನುದಾನವನ್ನು ಒದಗಿಸುತ್ತಿದ್ದಾರೆ ಎಂದು ಬಸವರಾಜ ಹೇಳಿದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯರಾದ ಎಂ.ಎನ್.ಶ್ರೀಕಾಂತ್, ಜಯ ಪ್ರಕಾಶ್, ಸುರೇಶ್, ರಾಧಮ್ಮ ವೆಂಕಟೇಶ್, ಎಸ್.ಜಿ.ನಾಗರಾಜ್, ಪಿ.ಜೆ.ಅಂತೋಣಿಸ್ವಾಮಿ, ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್, ಬೆಂಗಳೂರು ಜಲಮಂಡಳಿ ಸದಸ್ಯ ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News