ಮೊದಲು ಬಿಜೆಪಿ ಪರಿವರ್ತನೆ ಆಗಲಿ:ಗೃಹ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, ನ.2: ಜನರು ಕೊಟ್ಟಿದ್ದ ಅಧಿಕಾರ ದುರುಪಯೋಗ ಮಾಡಿಕೊಂಡು ಹಗರಣಗಳನ್ನು ಮಾಡಿದ್ದ ಬಿಜೆಪಿ ಮೊದಲು ಪರಿವರ್ತನೆ ಆಗಬೇಕು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಗುರುವಾರ ಮುಖ್ಯಮಂತ್ರಿಗಳ ನಿವಾಸ ಕೃಷ್ಣಾದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಮುಖಂಡರು ಪರಿವರ್ತನಾ ರ್ಯಾಲಿಯನ್ನು ಪಶ್ಚಾತ್ತಾಪ ರ್ಯಾಲಿ ಎಂದು ಹೆಸರು ಬದಲಾವಣೆ ಮಾಡಿಕೊಂಡು ಜನರ ಬಳಿಗೆ ಹೋಗಿ ಕ್ಷಮೆ ಕೇಳಿದರೆ ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ಈ ಹಿಂದೆ ಬಿಜೆಪಿಗೆ ರಾಜ್ಯದ ಜನರು ಅಧಿಕಾರ ನೀಡಿದರು. ಆದರೆ, ಇವರು ಸರಿಯಾಗಿ ಆಡಳಿತ ನಡೆಸಲಿಲ್ಲ. ಅದು ಅಲ್ಲದೆ, ಮೂರು ಜನ ಮುಖ್ಯಮಂತ್ರಿಗಳು ಬದಲಾವಣೆಯಾದರು. ಸಾಲು ಸಾಲಾಗಿ ಜೈಲಿಗೆ ಹೋಗಿ ಬಂದರು. ಅವರು ಮಾಡಿದ ಹಗರಣಗಳನ್ನು ನನ್ನ ಬಾಯಿಂದ ಹೇಳಲು ಮನಸ್ಸು ಬರುತ್ತಿಲ್ಲ ಎಂದ ಅವರು, ಜನ ಕೊಟ್ಟ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡವರು ಈಗ ಪಶ್ಚಾತ್ತಾಪ ರ್ಯಾಲಿ ಮಾಡಬೇಕಿದೆ. ಇವರು ಮಾಡಿದ ತಪ್ಪುಗಳಿಗೆ ಕ್ಷಮೆಯೇ ಇಲ್ಲವಾದರೂ ಕನಿಷ್ಠ ಜನರ ಮುಂದೆ ಹೋಗಿ ತಮ್ಮನ್ನು ಕ್ಷಮಿಸಿ ಎಂದು ಕೇಳಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯ ಭ್ರಷ್ಟಾಚಾರದ ಬಗ್ಗೆಯೂ ಹೇಳುವಂತಿಲ್ಲ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿತ್ತು. ಇತ್ತೀಚೆಗೆ ಗುಜರಾತ್ ರಾಜ್ಯ ಸಭೆಯಲ್ಲಿ ಅಲ್ಲಿನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದಾಗ ಬಿಜೆಪಿಯವರು ಬೊಬ್ಬೆ ಹಾಕಿದರು. ಇವರ ಆಡಳಿತದಲ್ಲಿ ಅದೆಷ್ಟು ಬಾರಿ ರೆಸಾರ್ಟ್ ಯಾತ್ರೆ ಮಾಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಪರಿವರ್ತನಾ ರ್ಯಾಲಿಯ ಹಿಂದೆ ಜನಪರವಾದ ಯಾವುದೇ ಉದ್ದೇಶಗಳಿಲ್ಲ. ಚುನಾವಣೆ ಸಮೀಪಿಸುತ್ತಿದೆ ಎಂಬ ಕಾರಣಕ್ಕಾಗಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ.ರಾಜ್ಯದ ಜನರಿಗೆ ಬಿಜೆಪಿಯ ರಾಜ್ಯ ನಾಯಕರು ಮೇಲಾಗಲಿ, ಕೇಂದ್ರ ನಾಯಕರ ಮೇಲಾಗಲಿ ವಿಶ್ವಾಸವಿಲ್ಲ. ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದೆ ಎಂದರು.
ಬಂದೋಬಸ್ತ್: 75 ದಿನಗಳ ಕಾಲ ಬಿಜೆಪಿಯ ಪರಿವರ್ತನಾ ರ್ಯಾಲಿಗೆ ಸೂಕ್ತ ಬಂದೋಬಸ್ತ್ ಮಾಡಲಾಗುವುದು ಎಂದ ಅವರು, ರ್ಯಾಲಿಯ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದರೆ ಅದಕ್ಕೆ ಬಿಜೆಪಿ ನಾಯಕರೇ ಹೊಣೆ. ಪರಿವರ್ತನಾ ರ್ಯಾಲಿಯ ಹೆಸರಿನಲ್ಲಿ ಯಾರಾದರೂ ಕಾನೂನು ಕ್ರಮ ಕೈಗೆತ್ತಿಕೊಂಡರೆ ಪ್ರಭಾವಿ ವ್ಯಕ್ತಿಯಾದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.