'ಬಿಜೆಪಿಯವರು ಮೊದಲು ಪರಿವರ್ತನೆಯಾಗಬೇಕು' : ಪರಿವರ್ತನಾ ಯಾತ್ರೆ ವಿರುದ್ದ ಹೆಚ್.ಡಿ.ರೇವಣ್ಣ ಟೀಕೆ
ಶಿವಮೊಗ್ಗ, ನ. 2: ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯ ವಿರುದ್ದ ಮಾಜಿ ಸಚಿವ, ಜೆಡಿಎಸ್ ಪಕ್ಷದ ಮುಖಂಡ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
'ಪರಿವರ್ತನೆ ಯಾತ್ರೆ ಕೈಬಿಟ್ಟು, ರಾಜ್ಯದ ರೈತರ ಸಂಕಷ್ಟಕ್ಕೆ ನೆರವಾಗಲು ಬಿಜೆಪಿ ನಾಯಕರು ಮುಂದಾಗಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಗಮನಹರಿಸಬೇಕು. ಈ ರೀತಿಯ ಯಾತ್ರೆ ನಡೆಸುವುದರ ಬದಲಾಗಿ ಬಿಜೆಪಿಯವರು ಮೊದಲು ತಾವು ಪರಿವರ್ತನೆಯಾಗಬೇಕು' ಎಂದು ಹೆಚ್.ಡಿ.ರೇವಣ್ಣ ಕುಟುಕಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಚುನಾವಣೆ ಹಿನ್ನೆಲೆಯಲ್ಲಿ ಯಾತ್ರೆ, ಸಮಾವೇಶ ನಡೆಸುತ್ತಾ ರಾಜ್ಯದ ಹಿತ ಮರೆಯುವುದು ಸಲ್ಲದು. ಕೇಂದ್ರ ಸರ್ಕಾರದ ಮೇಲೆ ರೈತರ ಸಾಲಮನ್ನಾ ವಿಚಾರವನ್ನು ಹೇರುವಮೂಲಕ ಅದನ್ನು ಜಾರಿಗೊಳಿಸುವ ಕೆಲಸವನ್ನು ಮೊದಲು ಮಾಡಲಿ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಕಿತ್ತಾಡುವುದನ್ನು ಬಿಟ್ಟು, ರೈತರ ಸಮಸ್ಯೆಗಳನ್ನು ಪರಿಹರಿಸಲು ಆಲೋಚನೆ ಮಾಡಬೇಕು. ರಾಜ್ಯದಲ್ಲಿ ಅಡಿಕೆ, ತೆಂಗು ಹಾಗೂ ಇನ್ನಿತರ ಬೆಳೆಗಳು ತೀವ್ರ ಪ್ರಮಾಣದಲ್ಲಿ ಹಾಳಾಗಿದ್ದು, ಸೂಕ್ತ ಪರಿಹಾರ ನೀಡುವ ಮೂಲಕ ರೈತರ ಕಣ್ಣೀರು ಒರೆಸಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೇಂದ್ರ ಸರ್ಕಾರದ ಐವರು ಮಂತ್ರಿಗಳಿದ್ದಾರೆ. ಆದರೆ ಅವರಿಗೆ ರಾಜ್ಯದ ಸಮಸ್ಯೆಯೇ ಗೊತ್ತಿಲ್ಲ. ಹೀಗಿರುವಾಗ ಅವರಿಂದ ಯಾವ ನಿರೀಕ್ಷೆಯನ್ನು ರೈತರು ಮಾಡಬಹುದು ಎಂದು ಪ್ರಶ್ನಿಸಿದ ರೇವಣ್ಣ, ರಾಜ್ಯದ ಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳು ಇಲಾಖೆಗೆ ಬಂದಹಣವನ್ನು ವಾಪಸ್ಸು ಕಳುಹಿಸುವಬದಲು ರೈತರಿಗೆ ನೀಡಬೇಕಾದ ಪರಿಹಾರಕ್ಕೆ ಜೋಡಿಸಬೇಕೆಂದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಸಿದ್ಧಗೊಳಿಸಿದೆ. 140ಕ್ಷೇತ್ರಗಳ ಪಟ್ಟಿ ಸಿದ್ದಪಡಿಸಲಾಗಿದೆ. ಉಳಿದ ಕ್ಷೇತ್ರಗಳಲ್ಲಿ ಹಲವು ಆಕಾಂಕ್ಷಿಗಳಿರುವುದರಿಂದ ಅವುಗಳ ಆಯ್ಕೆನಡೆಯುತ್ತಿದೆ ಬಹುಮತದೊಂದಿಗೆ ತಮ್ಮ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಗೋಷ್ಠಿಯಲ್ಲಿ ಶಾಸಕಿ ಶಾರದಾಪೂರ್ಯಾನಾಯ್ಕ್, ಜಿಲ್ಲಾಧ್ಯಕ್ಷ ಎಚ್.ಎನ್. ನಿರಂಜನ, ಮೇಯರ್ ಏಳುಮಲೈ, ಮಾಜಿ ಎಂಎಲ್‍ಸಿ ಜಿ. ಮಾದಪ್ಪ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮಹಮ್ಮದ್ ಯೂಸೂಫ್ ಭಯ್ಯಾ ಸೇರಿದಂತೆ ಮೊದಲಾದವರಿದ್ದರು.