×
Ad

ಬಿಡಿಗಾಸು ನೀಡುವುದಿಲ್ಲ ಎಂದು ರಾಜ್ಯಕ್ಕೆ ಅಪಮಾನ ಮಾಡಿದ ನರೇಂದ್ರ ಮೋದಿ: ದಿನೇಶ್‌ ಗುಂಡೂರಾವ್

Update: 2017-11-02 20:37 IST

ಬೆಂಗಳೂರು, ನ.2: ರಾಜ್ಯಕ್ಕೆ ಇನ್ನು ಮುಂದೆ ಬಿಡಿಗಾಸು ನೀಡುವುದಿಲ್ಲ ಎನ್ನುವ ಮೂಲಕ ಪ್ರಧಾನಿ ನರೇಂದ್ರಮೋದಿ ಕನ್ನಡಿಗರಿಗೆ ಧಮಕಿ ಹಾಕಿದ್ದಾರೆ. ಇದರಿಂದ ರಾಜ್ಯಕ್ಕೆ ಅಪಮಾನವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಥವಾ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ನಮಗೆ ಭಿಕ್ಷೆ ಕೊಡಬೇಕಿಲ್ಲ, ನಾವು ಭಿಕ್ಷುಕರಲ್ಲ. ಕೇಂದ್ರದ ಮುಂದೆ ಕೈ ಚಾಚಿ ನಿಲ್ಲಬೇಕಿಲ್ಲ, ಅದು ನಮ್ಮ ಹಕ್ಕು. ಅವರೇನು ನಮಗೆ ವಿಶೇಷ ಅನುದಾನ ನೀಡಿಲ್ಲ. ಬರ ಪರಿಹಾರಕ್ಕೆ ಮಹಾರಾಷ್ಟ್ರ ಹಾಗೂ ಗುಜರಾತ್‌ಗಿಂತ ಕಡಿಮೆ ಅನುದಾನ ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರಕಾರಕ್ಕೆ ಕೇಂದ್ರ ಸರಕಾರ ನೀಡಿರುವ ಅನುದಾನದ ವಿವರಗಳನ್ನು ಕೇಳಲು ಅಮಿತ್ ಶಾ ಯಾರು? ಪ್ರಧಾನಮಂತ್ರಿ ಅಥವಾ ಕೇಂದ್ರ ಹಣಕಾಸು ಸಚಿವರು ಅನುದಾನದ ಬಗ್ಗೆ ಕೇಳಲಿ. ಕೇಂದ್ರದಿಂದ ಅನುದಾನ ಪಡೆಯುವುದು ನಮ್ಮ ಹಕ್ಕು. ಅಮಿತ್‌ಶಾಗೆ ಸಂವಿಧಾನದ ಬಗ್ಗೆ ಅರಿವಿಲ್ಲ ಎಂದು ದಿನೇಶ್‌ಗುಂಡೂರಾವ್ ಕಿಡಿಗಾರಿದರು.

 ರೈಲ್ವೆ ಯೋಜನೆಗಳಿಗೆ ಶೇ.50ರಷ್ಟು ಅನುದಾನ ಹಾಗೂ ಭೂಮಿಯನ್ನು ಉಚಿತವಾಗಿ ರಾಜ್ಯ ಸರಕಾರ ನೀಡುತ್ತದೆ. ಪ್ರಧಾನಿ ನರೇಂದ್ರಮೋದಿ ಭಾಗವಹಿಸಿದ್ದ ಬೀದರ್-ಕಲಬುರಗಿ ನಡುವಿನ ರೈಲು ಸಂಚಾರದ ಲೋಕಾರ್ಪಣೆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸರಿಯಾಗಿ ಆಹ್ವಾನವನ್ನು ನೀಡಿಲ್ಲ. ಬಿಜೆಪಿಯವರು ಸಂಸದೀಯ ತತ್ವಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಅಮಿತ್ ಶಾ ಈ ಸಮಾರಂಭದಲ್ಲಿ ರಣಕಹಳೆ ಮೊಳಗಿಸುತ್ತಾರೆ, ಯಾವುದೋ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸುತ್ತಾರೆ ಎಂದುಕೊಂಡಿದ್ದೆವು. ಆದರೆ, ನಿರೀಕ್ಷೆ ಹುಸಿಯಾಗಿದೆ. ಬಿಜೆಪಿ ಕಾರ್ಯಕರ್ತರೇ ಸಮಾರಂಭಕ್ಕೆ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಜೆಪಿಯವರ ನಕಾರಾತ್ಮಕ ಧೋರಣೆ ಇದಕ್ಕೆ ಕಾರಣ ಎಂದು ದಿನೇಶ್‌ಗುಂಡೂರಾವ್ ಟೀಕಿಸಿದರು.

ರಾಷ್ಟ್ರೀಯ ಪಕ್ಷವೊಂದರ ಚುನಾವಣಾ ಪ್ರಚಾರ ಚಾಲನಾ ಸಭೆ, ಈ ಹಿಂದೆ ಯಾವತ್ತೂ ಈ ರೀತಿ ಫ್ಲಾಪ್ ಆಗಿರಲಿಲ್ಲ. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಕಡಿಮೆ ಆಗಿರುವುದಕ್ಕೆ ಇದೇ ಉದಾಹರಣೆ. ಇದು ರಾಜ್ಯದ ಪರಿವರ್ತನೆ ಅಲ್ಲ, ಬಿಜೆಪಿ ನಾಯಕರ ಪರಿವರ್ತನೆ ಅಂತ ಹೇಳಬಹುದು. ಪಶ್ಚಾತ್ತಾಪ ಯಾತ್ರೆ ಮಾಡಿದರೆ ಜನ ಅವರ ಕಡೆ ನೋಡಬಹುದು ಎಂದು ಅವರು ವ್ಯಂಗ್ಯವಾಡಿದರು.

ಅಮಿತ್ ಶಾ ಹಾಗೂ ಯಡಿಯೂರಪ್ಪ ನಡುವೆ ಕೆಲವು ವಿಷಯಗಳಲ್ಲಿ ಸಾಮ್ಯತೆಯಿದೆ. ಇಬ್ಬರು ಜೈಲಿಗೆ ಹೋಗಿ ಬಂದವರು ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು.

ಅಮಿತ್ ಶಾ ಯಾರು?

ರಾಜ್ಯ ಸರಕಾರಕ್ಕೆ ಕನ್ನಡ ರಾಜ್ಯೋತ್ಸವಕ್ಕಿಂತಲೂ ಟಿಪ್ಪು ಜಯಂತಿ ಮೇಲೆ ಆಸಕ್ತಿ ಹೆಚ್ಚು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಕನ್ನಡದ ಬಗ್ಗೆ ಪ್ರಶ್ನೆ ಮಾಡಲು ಅಮಿತ್ ಶಾ ಯಾರೂ ಎಂದು ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News