×
Ad

ಮಳೆಯಾಶ್ರಿತ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಲು ಪ್ರಕಾಶ್ ಕಮ್ಮರಡಿ ಸಲಹೆ

Update: 2017-11-02 21:03 IST

ಮಡಿಕೇರಿ, ನ.2 :ಭತ್ತ ಸೇರಿದಂತೆ ರಾಗಿ, ಜೋಳ, ನವಣೆ, ಸಾಮೆ, ಕಂಬು ಇವುಗಳು ಮಳೆಯಾಶ್ರಿತ ಸಿರಿಧಾನ್ಯ ಬೆಳೆಗಳಾಗಿದ್ದು, ಈ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಅವರು ಸಲಹೆ ನೀಡಿದ್ದಾರೆ.    

 ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು. 
  ಭತ್ತವು ಸಹ ಸಿರಿಧಾನ್ಯ ಬೆಳೆಯಾಗಿದ್ದು, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯಾಶ್ರಿತ ಬೆಳೆಯಾದ ಭತ್ತ ಬೆಳೆಯಲು ಮುಂದಾಗಬೇಕು. ಯಾವುದೇ ಕಾರಣಕ್ಕೂ ಭೂಮಿಯನ್ನು ಪಾಳು ಬಿಡಬಾರದು. ಸರ್ಕಾರ ಕ್ವಿಂಟಾಲ್ ಭತ್ತಕ್ಕೆ 1550 ರೂ ಬೆಂಬಲ ಬೆಲೆ ನೀಡುತ್ತಿದೆ ಎಂದರು.  

ಪ್ರತಿಯೊಬ್ಬರಿಗೂ ಊಟಕ್ಕೆ ಆಹಾರ ಭದ್ರತೆ ಪ್ರಥಮ ಆದ್ಯತೆ. ಜೊತೆಗೆ ಆರ್ಥಿಕ ಭದ್ರತೆಯು ಸಹ ಅತೀ ಮುಖ್ಯ. ಆ ನಿಟ್ಟಿನಲ್ಲಿ ಕೃಷಿ ಭೂಮಿ ಸದ್ಭಳಕೆ ಮಾಡಿಕೊಳ್ಳುವತ್ತ ಉತ್ತೇಜನ ನೀಡಬೇಕು ಎಂದು ಅವರು ಹೇಳಿದರು.

ಭತ್ತ, ರಾಗಿ, ತೊಗರಿ ಬದಲಾಗಿ ಮುಸುಕಿನ ಜೋಳ, ಅಡಿಕೆ ಜೊತೆಗೆ ಹತ್ತಿ ಬೆಳೆಯುವುದು ಹೆಚ್ಚಾಗುತ್ತಿದೆ. ಇದು ಸಮರ್ಪಕವಲ್ಲ, ರಾಗಿ, ಜೋಳ, ದ್ವಿದಳ ಧಾನ್ಯ ಹಾಗೂ ಎಣ್ಣೆ ಕಾಳುಗಳನ್ನು ಹೆಚ್ಚಾಗಿ ಬೆಳೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.  

ಸರ್ಕಾರ ಭತ್ತ, ತೊಗರಿ, ರಾಗಿ, ಜೋಳಕ್ಕೆ ಬೆಂಬಲ ಬೆಲೆಯಡಿ ಖರೀದಿ ಮಾಡುತ್ತಿದೆ. ಆದರೆ ಜೋಳ, ರಾಗಿ, ಭತ್ತ ಬೆಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಆಹಾರ ಪದಾರ್ಥದಲ್ಲಿ ಕೊರತೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.  

ಕಾಳು ಮೆಣಸು ರಾಜ್ಯ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಸಹ ರೈತರ ಸಂಕಷ್ಟ ನಿವಾರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕರಿಮೆಣಸು ಆಮದು ತಡೆಯುವ ಸಂಬಂಧ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಪ್ರಕಾಶ್ ಕಮ್ಮರಡಿ ಅವರು ತಿಳಿಸಿದರು.  
ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಬೆಂಬಲ ಬೆಲೆಯಡಿ ಭತ್ತ ಖರೀದಿ ಮಾಡುವ ನಿಟ್ಟಿನಲ್ಲಿ ಟಾಸ್ಕ್‍ಪೋರ್ಸ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು. 

ರೈತರಾದ ಭಾಗಮಂಡಲದ ಹರ್ಷ ಅವರು ಭತ್ತ ಬೆಳೆಗೆ ಕನಿಷ್ಠ 2 ಸಾವಿರ ರೂ. ಬೆಂಬಲ ಬೆಲೆ ನೀಡಬೇಕು ಎಂದು ಅವರು ಮನವಿ ಮಾಡಿದರು. 
ಕಪಣಪ್ಪ ಅವರು ಮಾತನಾಡಿ ಹಿಂದೆ 10 ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದೆ, ಈಗ 4 ಎಕರೆಗೆ ಬಂದಿದ್ದೇನೆ. ಭತ್ತ ಬೆಳೆಯುವುದರಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಆದ್ದರಿಂದ ಭತ್ತಕ್ಕೆ ಹೆಚ್ಚಿನ ಬೆಂಬಲ ಬೆಲೆ ನೀಡಬೇಕು ಎಂದು ಅವರು ಮನವಿ ಮಾಡಿದರು. 

ಚೇರಂಬಾಣೆಯ ಹ್ಯಾರಿ ತಮ್ಮಯ್ಯ ಅವರು ಮಾತನಾಡಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ಪರಿಹಾರ ಹೆಚ್ಚಾಗಿ ಒದಗಿಸಬೇಕು ಎಂದರು.
ರೈತರಾದ ತೇಜಸ್ ಅವರು ಭತ್ತ ಬೆಳೆಗೆ ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಸಬೇಕಿದೆ. ಜಾನುವಾರುಗಳನ್ನು ಸಾಕಲು ಹೆಚ್ಚಿನ ಉತ್ತೇಜನ ನೀಡಬೇಕಿದೆ ಎಂದು ಅವರು ಹೇಳಿದರು. 

ಮಾಜಿ ಸೈನಿಕರಾದ ತಿಮ್ಮಯ್ಯ ಅವರು ಕೊಡಗು ಜಿಲ್ಲೆಯಲ್ಲಿ ಹೋಬಳಿಗೊಂದು ಮಣ್ಣು ಪರೀಕ್ಷಾ ಕೇಂದ್ರಗಳು ಸ್ಥಾಪಿಸಬೇಕು ಎಂದರು.  
ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ 60 ರಿಂದ 70 ರೂ. ಇದೆ. ಆದರೆ ಭತ್ತಕ್ಕೆ 15 ರೂ. ಮಾತ್ರ ಇದೆ. ಇದರಿಂದ ರೈತರಿಗೆ ಪ್ರಯೋಜನವೇನು ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ಬೆಳೆಗಾರರ ಒಕ್ಕೂಟದ ವಿಶ್ವನಾಥ್ ಅವರು ಇಂಡೋನೇಷಿಯಾ, ವಿಯೆಟ್ನಾಂ ಮತ್ತು ಶ್ರೀಲಂಕಾದಿಂದ ಕರಿಮೆಣಸು ಆಮದಾಗಿದ್ದು, ಈ ಸಂಬಂಧ ಎಸಿಬಿಯಿಂದ ತನಿಖೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು. 
ಕರಿಮೆಣಸು ಆಮದು ತಡೆಯುವ ನಿಟ್ಟಿನಲ್ಲಿ ಆನ್‍ಲೈನ್ ಮೂಲಕ ಅಭಿಯಾನ ನಡೆಯುತ್ತಿದ್ದು, ಸುಮಾರು 2,500 ರೈತರು ಸಹಿ ಮಾಡಿದ್ದಾರೆ ಎಂದು ಅವರು ವಿವರಿಸಿದರು. 

ರೈತರಾದ ಎಂ.ಬಿ.ದೇವಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಭತ್ತ ಬೆಳೆ ಕಡಿಮೆಯಾಗುತ್ತಿದ್ದು, ಭತ್ತ ಬೆಳೆಯಲು ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಹೇಳಿದರು. 

ರೈತರಾದ ಕುಮಾರ, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ರಾಜು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ದೇವಕಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ವೀರೇಂದ್ರ ಕುಮಾರ್, ಸಾಂಬಾರ ಮಂಡಳಿಯ ನಿರ್ದೇಶಕರಾದ ಅಂಕೇಗೌಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ, ಮಂಜುನಾಥ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಮೋದ್, ರಮೇಶ್, ಇತರರು ಹಲವು ಮಾಹಿತಿ ನೀಡಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News