×
Ad

ಕೋಮುವಾದಿಗಳು ಜಾತ್ಯತೀತವಾದಿಗಳಾಗಿ ಬದಲಾಗಲಿ: ಮುಖ್ಯಮಂತ್ರಿ

Update: 2017-11-02 21:13 IST

ಬೆಂಗಳೂರು, ನ.2: ಬಿಜೆಪಿಯವರು ಪರಿವರ್ತನಾ ರ್ಯಾಲಿ ಮಾಡುವುದಲ್ಲ. ಮೊದಲು ಅವರು ಪರಿವರ್ತನೆ ಆಗಬೇಕು. ಕೋಮುವಾದಿಗಳು ಜಾತ್ಯತೀತ ವಾದಿಗಳಾಗಿ ಬದಲಾಗಬೇು ಎಂದು ಮುಖ್ಯಮಂತ್ರಿ ತಿಳಿಸಿದರು.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಜನಬೆಂಬಲ ಅವರಿಗೆ ಸಿಗುವುದಿಲ್ಲ. ಮೊದಲೇ ದಿನವೆ ರ್ಯಾಲಿ ವಿಫಲವಾಗಲಿದೆ. ಇನ್ನೂ ಹಳ್ಳಿಗಳಿಗೆ ಹೋಗಲಿ ಗೊತ್ತಾಗುತ್ತದೆ ಎಂದರು.

ಪರಿವರ್ತನಾ ರ್ಯಾಲಿಗೆ ಬಿಜೆಪಿ ಭಾರಿ ಸಿದ್ಧತೆ ನಡೆಸಿತ್ತು. ಮೂರೂವರೆ ಲಕ್ಷ ಜನ ಸೇರಲಿದ್ದಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಆರ್.ಅಶೋಕ್ ಮುಂತಾದವರು ರಾಜ್ಯವ್ಯಾಪಿ ಪ್ರವಾಸ ಮಾಡಿ ಜನರನ್ನು ಸೇರಿಸುವ ಪ್ರಯತ್ನ ಮಾಡಿದ್ದರು. ಆದರೆ, ಜನ ತಾವು ಬಿಜೆಪಿ ಜೊತೆ ಇಲ್ಲ ಎಂದು ಹೇಳಿದ್ದಾರೆ. ರಾಜ್ಯದ ಜನತೆ ಕಾಂಗ್ರೆಸ್ ಪರವಾಗಿದ್ದಾೆ ಎಂದು ಮುಖ್ಯಮಂತ್ರಿ ಹೇಳಿದರು.

ರ್ಯಾಲಿಗೆ ಜನ ಬರದಂತೆ ಸರಕಾರ ತಡೆದಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಜನರೇ ಬಂದಿಲ್ಲ. ಹೀಗಿರುವಾಗ ತಡೆಯುವುದು ಯಾರನ್ನು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಬಿಜೆಪಿಯವರು ಈ ಹಿಂದೆ ಮಂಗಳೂರಿಗೆ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು. ಕೋಮುಭಾವನೆ ಕೆರಳಿಸಲು ಹೋಗುತ್ತಿದ್ದಾರೆ ಎಂಬ ಕಾರಣಕ್ಕೆ ಅನುಮತಿ ನೀಡಿರಲಿಲ್ಲ. ಈಗ ಪಕ್ಷದ ಕೆಲಸಕ್ಕಾಗಿ ಹೋಗುತ್ತಿದ್ದಾರೆ. ಇದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿ ಬೈಕ್ ರ್ಯಾಲಿಗೆ ಈಗ ಅನುಮತಿ ನೀಡಿದ್ದೇವೆ ಎಂದರು.

ಅಮಿತ್ ಶಾ ಹೇಳಿಕೆಗೆ ತಿರುಗೇಟು: ಕನ್ನಡ ರಾಜ್ಯೋತ್ಸವಕ್ಕಿಂತ ಮುಖ್ಯಮಂತ್ರಿಗೆ ಟಿಪ್ಪುಜಯಂತಿ ಬಗ್ಗೆ ಹೆಚ್ಚು ಕಾಳಜಿ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ರಾಜ್ಯೋತ್ಸವದ ಬಗ್ಗೆ ಈ ನಾಡಿನ ನೆಲ, ಜಲ ಹಾಗೂ ಭಾಷೆ ಬಗ್ಗೆ ನಮಗೆ ಅಪಾರವಾದ ಬದ್ಧತೆ ಇದೆ. ರಾಜ್ಯೋತ್ಸವದ ಕುರಿತು ಅಮಿತ್ ಶಾ ಅಂತಹವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯೋತ್ಸವವನ್ನು ಎಷ್ಟು ಅಭಿಮಾನದಿಂದ ಆಚರಣೆ ಮಾಡುತ್ತೇವೆಯೊ ಅಷ್ಟೇ ಅಭಿಮಾನದಿಂದ ಟಿಪ್ಪು ಸುಲ್ತಾನ್ ಸೇರಿದಂತೆ 26 ಮಹಾನ್ ಪುರುಷರು ಹಾಗೂ ಮಹಾ ಮಾತೆಯರ ಜಯಂತಿಯನ್ನು ನಮ್ಮ ಸರಕಾರ ಆಚರಿಸುತ್ತದೆ. ನಾವು ಇತಿಹಾಸ ಪುರುಷರನ್ನು ನೆನಪು ಮಾಡಿಕೊಳ್ಳುವವರು. ಆದರೆ, ಬಿಜೆಪಿಯವರು ಇತಿಹಾಸವನ್ನು ತಿರುಚುವವರು ಎಂದು ಮುಖ್ಯಮಂತ್ರಿ ಟೀಕಿಸಿದರು.

ಶಾ ಕುಟುಂಬದ ಹಣವಲ್ಲ: ಕೇಂದ್ರ ಸರಕಾರ ರಾಜ್ಯಕ್ಕೆ ಎರಡು ಲಕ್ಷ ಕೋಟಿ ಅನುದಾನ ಕೊಟ್ಟಿದೆ. ಆದರೆ, ಸದ್ಬಳಕೆಯಾಗಿಲ್ಲ ಎಂಬ ಅಮಿತ್ ಶಾ ಹೇಳಿಕೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ಕೇಂದ್ರ ಕೊಟ್ಟಿರುವ ಅನುದಾನದ ಬಗ್ಗೆ ಶಾ ಅವರಿಗೆ ಲೆಕ್ಕ ಗೊತ್ತಿದೆಯೇ ಎಂದು ಪ್ರಶ್ನಿಸಿದರು.

ಇಷ್ಟಕ್ಕೂ ಕೇಂದ್ರ ಸರಕಾರ ರಾಜ್ಯಕ್ಕೆ ಕೊಡುವ ಅನುದಾನ ಯಾರದ್ದು? ಅದು ಅಮಿತ್ ಶಾ ಅಥವಾ ಅವರ ಪುತ್ರ ಸಂಪಾದನೆ ಮಾಡಿರುವ ಹಣ ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವಿವಿಧ ರೂಪದಲ್ಲಿ ರಾಜ್ಯದಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಕೇಂದ್ರ ಸರಕಾರ ನಮಗೆ ಪಾಲು ಕೊಡುತ್ತದೆ. ಅದು ಸಂವಿಧಾನಬದ್ಧವಾಗಿ. ಐದು ವರ್ಷಕ್ಕೊಮ್ಮೆ ರಚನೆಯಾಗುವ ಹಣಕಾಸು ಆಯೋಗದ ಶಿಫಾರಸ್ಸು ಅನುಸಾರವಾಗಿ ರಾಜ್ಯಗಳಿಗೆ ಅನುದಾನ ಹೋಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News