ಕನ್ನಡದಲ್ಲಿ ಪುಸ್ತಕ ಮುದ್ರಿಸದ ಹಿಂ.ವರ್ಗಗಳ ಆಯೋಗ : ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ
ಬೆಂಗಳೂರು, ನ.2: ವಿಚಾರ ಸಂಕಿರಣದ ಪುಸ್ತಕವನ್ನು ಆಂಗ್ಲಭಾಷೆಯಲ್ಲಿ ಮುದ್ರಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಲೋಕಾರ್ಪಣೆಗೊಂಡ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಪುಸ್ತಕಗಳ ಪೈಕಿ ಸೆಮಿನಾರ್ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಮುದ್ರಿಸಿದಕ್ಕಾಗಿ ಆಯೋಗದ ಅಧ್ಯಕ್ಷ ಕಾಂತರಾಜುಗೆ ಮುಖ್ಯಮಂತ್ರಿ ತೀವ್ರ ತರಾಟೆಗೆ ತೆಗೆದುಕೊಂಡರು.
ರಾಜ್ಯೋತ್ಸವ ಭಾಷಣದಲ್ಲಿ ಕನ್ನಡದಲ್ಲಿ ವ್ಯವಹರಿಸಿರಿ, ಕನ್ನಡಕ್ಕೆ ಹೆಚ್ಚು ಒತ್ತು ನೀಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೀರಾ. ಆದರೆ, ಇಲ್ಲಿ ಆಯೋಗ ಹೊರತಂದಿರುವ ಪುಸ್ತಕವನ್ನು ಕನ್ನಡದಲ್ಲಿ ಯಾಕೆ ಮುದ್ರಿಸಿಲ್ಲ ಎಂದು ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ ಕಾಂತರಾಜುಗೆ ಅವರು ತರಾಟೆಗೆ ತೆಗೆದುಕೊಂಡರು.
ಪುಸ್ತಕವನ್ನು ಯಾಕೆ ಕನ್ನಡದಲ್ಲಿ ಮುದ್ರಿಸಿಲ್ಲ ಎಂದು ಕಾಂತರಾಜುಗೆ ಮುಖ್ಯಮಂತ್ರಿ ಪ್ರಶ್ನಿಸಿದರು. ಈ ವೇಳೆ ಅವರು ಸಮರ್ಥನೆಗೆ ಮುಂದಾದರು. ಆದರೆ, ಇದ್ಯಾವುದಕ್ಕೂ ಕಿವಿಗೊಡದ ಸಿದ್ದರಾಮಯ್ಯ, ಪುಸ್ತಕವನ್ನು ಕನ್ನಡದಲ್ಲಿ ಮುದ್ರಿಸಿ ಎಂದು ಖಡಕ್ ಸೂಚನೆ ನೀಡಿದರು.