ಡಿವೈಎಸ್ಪಿ ಗಣಪತಿ ಸಾವಿನ ತನಿಖೆ: ಮಡಿಕೇರಿಗೆ ಸಿಬಿಐ ತಂಡ
ಮಡಿಕೇರಿ, ನ.2: ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ತನಿಖಾ ತಂಡ ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ಮನವಿಯೊಂದನ್ನು ಸಲ್ಲಿಸಿ, ಪ್ರಕರಣದ ಕುರಿತ ಸಿಐಡಿ ಮತ್ತು ಸ್ಥಳೀಯ ಪೊಲೀಸರ ತನಿಖಾ ವರದಿಗಳನ್ನು ಕೋರಿದೆ.
ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ ತನಿಖೆಯ ಭಾಗವಾಗಿ ಗುರುವಾರ ನಗರಕ್ಕೆ ಆಗಮಿಸಿದ ಸಿಬಿಐಯ ಐವರು ಅಧಿಕಾರಿಗಳ ತಂಡ ನ್ಯಾಯಾಲಯಕ್ಕೆ ತನಿಖಾ ವಿವರಗಳಿಗಾಗಿ ಮನವಿ ಸಲ್ಲಿಸಿ ಹಿಂದೆರಳಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುನ್ನ ಖಾಸಗಿ ವಾಹಿನಿವೊಂದಕ್ಕೆ ಸಂದರ್ಶನವನ್ನು ನೀಡಿದ್ದು, ಅದರಲ್ಲಿ ಸಚಿವ ಜಾರ್ಜ್ ಮತ್ತು ಇಬ್ಬರು ಪೊಲೀಸ್ ಉನ್ನತಾಧಿಕಾರಿಗಳ ಹೆಸರನ್ನು ಸೂಚಿಸಿದ್ದರು. ಈ ಬಗ್ಗೆ ಸಿಐಡಿ ತನಿಖೆ ನಡೆಸಿ ಮಡಿಕೇರಿ ನ್ಯಾಯಾಲಯಕ್ಕೆ ಬಿ ವರದಿಯನ್ನು ಸಲ್ಲಿಸಿತ್ತು.
ಸಿಐಡಿ ವರದಿಯನ್ನು ಡಿವೈಎಸ್ಪಿ ಗಣಪತಿ ಅವರ ತಂದೆ ಕುಶಾಲಪ್ಪ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು.