ನ.3 ರಂದು 24 ಗಂಟೆಗಳ ಕಾಲ ಖಾಸಗಿ ಆಸ್ಪತ್ರೆಗಳು ಬಂದ್ : ಭಾರತೀಯ ವೈದ್ಯಕೀಯ ಸಂಘ

Update: 2017-11-02 15:54 GMT

ಬೆಂಗಳೂರು, ನ.2: ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕ ಶುಲ್ಕ ವಿಧಿಸುವ ಕ್ರಮಕ್ಕೆ ಕಡಿವಾಣ ಹಾಕಲು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ (ಕೆಪಿಎಂಇ) ಕಾಯ್ದೆ ಜಾರಿಗೆ ವಿರೋಧಿಸಿ ಇಂದು (ನ.3) ಬೆಳಗ್ಗೆ 8ರಿಂದ 24 ಗಂಟೆಗಳ ಕಾಲ ಖಾಸಗಿ ಆಸ್ಪತ್ರೆಗಳ ಕಾರ್ಯ ನಿರ್ವಹಣೆ ಸ್ಥಗಿತಗೊಳ್ಳಲಿದೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.

ಗುರುವಾರ ಚಾಮರಾಜಪೇಟೆಯ ಭಾರತೀಯ ವೈದ್ಯಕೀಯ ಸಂಘದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ, ನ.3ರ ಬೆಳಗ್ಗೆ 8ರಿಂದ ನ.4ರ ಬೆಳಗ್ಗೆ 8ರವರೆಗೆ ಅಂದರೆ 24 ಗಂಟೆಗಳ ಕಾಲ ಎಲ್ಲಾ ಖಾಸಗಿ ವೈದ್ಯ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ತುರ್ತು ಚಿಕಿತ್ಸಾ ವಿಭಾಗ, ಸಾಮಾನ್ಯ ವಾರ್ಡ್ ಸೇರಿ ಒಳರೋಗಿಗಳಿಗೆ ಸೇವೆ ಮುಂದುವರೆಯಲಿದೆ. ಆದರೆ, ಹೊರ ರೋಗಿಗಳಿಗೆ ಯಾವುದೇ ವೈದ್ಯ ಸೇವೆ ದೊರೆಯುವುದಿಲ್ಲ. ಬದಲಿಗೆ ಮಾನವೀಯತೆ ದೃಷ್ಟಿಯಿಂದ ತುರ್ತು ಸೇವೆ ಮಾತ್ರ ಲಭ್ಯವಿರುತ್ತದೆ ಎಂದು ಹೇಳಿದರು.

ಕೆಪಿಎಂಇ ತಿದ್ದುಪಡಿ ಕಾಯ್ದೆ ಜಾರಿಯಿಂದ ಆಗುವ ಸಮಸ್ಯೆಗಳ ಕುರಿತು ಹಲವು ಬಾರಿ ಮನವಿ ಮಾಡಿದರು ಸರಕಾರ ಪರಿಗಣಿಸದಿರುವುದರಿಂದ ಖಾಸಗಿ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಲು ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳು ಹಾಗೂ ಸಣ್ಣ ಮತ್ತು ಮಧ್ಯಮ ನರ್ಸಿಂಗ್ ಹೋಮ್‌ಗಳು ಸೇವೆ ಸ್ಥಗಿತಗೊಳಿಸಲಿದ್ದು, ಬಹುತೇಕ ಕ್ಲಿನಿಕ್‌ಗಳು ಹಾಗೂ ಪ್ರಯೋಗಾಲಯಗಳು ಬಾಗಿಲು ಮುಚ್ಚಲಿವೆ ಎಂದರು.
ಕೆಪಿಎಂಇ ತಿದ್ದುಪಡಿ ಕಾಯ್ದೆ ಜಾರಿ ನಿರ್ಧಾರ ಕೈಬಿಡುವಂತೆ ಒತ್ತಾಯಿಸಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಆಯಾ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ರವೀಂದ್ರ ಹೇಳಿದರು.

ಸರಕಾರಿ ಆಸ್ಪತ್ರೆ ಬಂದ್ ಇಲ್ಲ 
 ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ ಚರ್ಚಿಸಲಿದ್ದು, ಸರಕಾರಿ ವೈದ್ಯರು ಹಾಗೂ ಮೆಡಿಕಲ್ ಸಿಬ್ಬಂದಿ ವರ್ಗ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರಕಾರ ಆದೇಶಿಸಿದೆ.

ಬೇಡಿಕೆಗಳೇನು ?
►ತಿದ್ದುಪಡಿ ಕಾಯಿದೆ ಜಾರಿಗೆ ಬದಲಾಗಿ, ಸರಕಾರವೇ ರಚಿಸಿದ್ದ ನ್ಯಾ. ವಿಕ್ರಮ್‌ಜಿತ್ ಸೇನ್ ಸಮಿತಿಯ ವರದಿ ಯಥಾವತ್ ಜಾರಿಗೆ ತರಲಿ.
►ಜೈಲು ಶಿಕ್ಷೆ, ದಂಡಗಳ ಭಯದಿಂದ ತುರ್ತು ಹಾಗೂ ಗಂಭೀರ ಪರಿಸ್ಥಿತಿಯಲ್ಲಿ ವೈದ್ಯರು ಚಿಕಿತ್ಸೆ ನೀಡಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಕಾನೂನು ವೈದ್ಯರಿಗಷ್ಟೆ ಅಲ್ಲದೆ, ರೋಗಿಗಳು ಹಾಗೂ ಅವರ ಕುಟುಂಬಸ್ಥರ ಮೇಲೂ ತೀವ್ರ ಪರಿಣಾಮ ಬೀರಲಿದೆ. ಹೀಗಾಗಿ ಇಂತಹ ನಿಲುವಿನಿಂದ ಹಿಂದೆ ಸರಿಯಬೇಕು.
►ರೋಗಿಗಳ ಸಮಸ್ಯೆ ಆಲಿಸಿ ನ್ಯಾಯ ಒದಗಿಸಲು ಹೊಸದಾಗಿ ಕುಂದು ಕೊರತೆ ಪರಿಹಾರ ಸಮಿತಿ ರಚಿಸುವ ಅಗತ್ಯವಿಲ್ಲ.
►ಖಾಸಗಿ ಆಸ್ಪತ್ರೆಗಳ ಸೇವೆಯ ಕುರಿತು ದರ ನಿಗದಿ ಪಡಿಸುವ ತೀರ್ಮಾನ ಕೈಗೊಂಡು ಆಸ್ಪತ್ರೆಗಳ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಅದನ್ನು ಬಿಟ್ಟು, ಕೇರಳ ಸರಕಾರ ಮಾದರಿಯಲ್ಲಿ ಕೇಂದ್ರದ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಆ್ಯಕ್ಟ್ ಜಾರಿಗೆ ತಂದು, ಸರಕಾರಿ ಆಸ್ಪತ್ರೆಗಳನ್ನೂ ಕಾಯ್ದೆ ವ್ಯಾಪ್ತಿಗೆ ತರಬೇಕು.

ತುರ್ತು ಸೇವೆ ಇರಲಿದೆ
ಸೂಪರ್ ಸ್ಪೆಷಾಲಿಟಿ, ಖಾಸಗಿ ನರ್ಸಿಂಗ್ ಹೋಮ್, ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿರುವ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳ ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ, ಎಲ್ಲ ಕಡೆ ಅಪಘಾತ, ಹೆರಿಗೆ ಸೇರಿ ತುರ್ತು ಸೇವೆ ಎಂದಿನಂತೆ ಇರಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News