ಬೈಕ್ ಗಳ ಮೇಲೆ ಮಗುಚಿ ಬಿದ್ದ ಲಾರಿ : ಓರ್ವ ಮೃತ್ಯು

Update: 2017-11-02 16:06 GMT

ಮುದ್ದೇಬಿಹಾಳ,ನ.2:ತಾಲೂಕಿನ ಯರಗಲ್ ಬಳಿ ರೂ.150ಕೋಟಿ ಯೋಜನೆಯ ಸೋಲಾರ್ ಪ್ಲಾಂಟ್‍ಗೆ ಗುಜರಾತಿನಿಂದ ಅಲ್ಯೂಮಿನಿಯಂ ಸಾಮಗ್ರಿಗಳನ್ನು ಹೊತ್ತು ಸಾಗಿಸುತ್ತಿದ್ದ ಲಾರಿಯೊಂದು ಇಲ್ಲಿನ ತಂಗಡಗಿ ರಸ್ತೆಯ ಸರ್ಕಾರಿ ಆಸ್ಪತ್ರೆ ತಿರುವಿನ ಹತ್ತಿರ ಇರುವ ಕಾಲುವೆ ಸೇತುವೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿ ಚಲಿಸುತ್ತಿದ್ದ ಎರಡು ಬೈಕ್‍ಗಳ ಮೇಲೆ ಮಗುಚಿಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.

ಘಟನೆಯಲ್ಲಿ ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕು ಎಮ್ಮೆಟ್ಟಿ ಗ್ರಾಮದ ಶಿವಾನಂದ ಬಾಳಪ್ಪ ಗುರಿಕಾರ (25) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಕ್ರಗಳ ಕೆಳಗಿ ಸಿಕ್ಕಿಕೊಂಡಿರುವ ಈತನ ದೇಹ ಗುರುತಿಸಲಾಗದಷ್ಟು ನುಜ್ಜುಗುಜ್ಜಾಗಿದ್ದು ಆತನ ಜೇಬಿನಲ್ಲಿ ಲಭ್ಯ ದಾಖಲೆಯಿಂದ ಆತನ ವಿವರ ಗೊತ್ತಾಗಿದೆ.

ಮಗುಚಿಬಿದ್ದ ಲಾರಿ ಕೆಳಗೆ ಇನ್ನೂ ಇಬ್ಬರು ಸಿಲುಕಿರುವ ಶಂಕೆ ಇದ್ದು ಇದಕ್ಕಾಗಿ ಪೊಲೀಸರು ಲಾರಿಯನ್ನು ಕ್ರೇನ್ ಸಹಾಯದಿಂದ ಮೇಲೆತ್ತಲು ಹರಸಾಹಸ ಪಡುತ್ತಿದ್ದಾರೆ.

ಘಟನೆಯಲ್ಲಿ ಇನ್ನೊಂದು ಬೈಕಿನಲ್ಲಿದ್ದ ಇಲ್ಲಿನ ಮೆಹ್ಬೂಬ್ ನಗರ ನಿವಾಸಿಗಳಾದ ಅಲ್ತಾಫ್ ಕಾಟೇರಿ, ಹಸನ್ ಸಾಬ್ ದಸ್ತಗೀರ ಸಾಬ ಗೊಳಸಂಗಿ, ಅಬ್ದುಲ್‍ ರಫೀಕ್ ಇಮಾಮ್ ಸಾಬ್ ದೊಡಮನಿ ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾ ಕೇಂದ್ರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರ ಎನ್ನಲಾಗುತ್ತಿದೆ.

ಘಟನೆಯಿಂದಾಗಿ ಒಂದು ಕಿ.ಮಿ.ವರೆಗೆ ಟ್ರಾಫಿಕ್ ಜಾಮ್ ಆಗಿದೆ. ಸ್ಥಳಕ್ಕೆ ಇಲ್ಲಿನ ಪೊಲೀಸರು ಭೇಟಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಬೃಹತ್ ಕ್ರೇನ್ ಮೂಲಕ ಪ್ರಯತ್ನಿಸಿದರೂ ಹೆಚ್ಚಿನ ಭಾರದ ಲಾರಿಯನ್ನು ಸ್ಥಳದಿಂದ ಕದಲಿಸುವುದು ಸಾಧ್ಯವಾಗುತ್ತಿಲ್ಲ.

ಶಾಸಕ ನಡಹಳ್ಳಿ ಮಾನವೀಯತೆ:

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ  ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿರುವ ವ್ಯವಸ್ಥೆ ಮಾಡಿದರು. ನಂತರ ಖುದ್ದು ತಾವೇ ಆಸ್ಪತ್ರೆಗೆ ಹೋಗಿ ಗಾಯಾಳುಗಳ ಸ್ಥಿತಿಯ ಕುರಿತು ವಿಚಾರಿಸಿದರು. ಇಬ್ಬರ ಸ್ಥಿತಿ ಗಂಭೀರವಾಗಿರುವುದನ್ನು ಅರಿತು ಅಂಬ್ಯುಲೆನ್ಸ್ ಮೂಲಕ ಅವರನ್ನು ಬಾಗಲಕೋಟೆ ಜಿಲ್ಲಾ ಖಾಸಗಿ ಆಸ್ಪತ್ರೆಗೆ ಸಾಗಿಸಲು ನೆರವಾದರು.

ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ನೋಡಿಕೊಳ್ಳುವುದಾಗಿ ಶಾಸಕ ನಡಹಳ್ಳಿ ತಿಳಿಸುವ ಮೂಲಕ ಮಾನವೀಯತೆ ನೆರವು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News