×
Ad

ಚಿಕ್ಕಬಳ್ಳಾಪುರ : ಸಾಮೂಹಿಕ ವಿವಾಹ ಮಹೋತ್ಸವ

Update: 2017-11-02 22:41 IST

ಚಿಕ್ಕಬಳ್ಳಾಪುರ,ನ.2: ತಾಲೂಕಿನ ಗಂಗರೆಕಾಲುವೆಯ ಜಲಗಣಪತಿ ದೇವಾಲಯದ 11ನೇ ವಾರ್ಷಿಕೋತ್ಸವದ ಅಂಗವಾಗಿ ಗಂಗರೇ ಕಾಲುವೆ ನಾರಾಯಣಸ್ವಾಮಿ ನೇತೃತ್ವದ ಜಲಗಣಪತಿ ದೇವಾಲಯದ ಸೇವಾ ಟ್ರಸ್ಟ್ ನಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 92 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನೂತನ ದಂಪತಿಗಳಿಗೆ ಆಶಿರ್ವಚನ ನೀಡಿ ಮಾತನಾಡಿದ ಕಾಗಿನೆಲೆ ಕ್ಷೇತ್ರ ಸದುರ್ಗಾ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಮದುವೆಯಾದ ನಂತರ ಹೆತ್ತವರಿಂದ ದೂರ ಇರಲು ಬಯಸುವ ಮನಸ್ಥಿತಿ ಪ್ರಸ್ತುತ ದಿನಗಳಲ್ಲಿ ಹೆಚ್ಚಾಗುತ್ತಿರುವುದು ದುರಂತವಾಗಿದ್ದು, ಅದರಲ್ಲೂ ವಿದ್ಯಾಂತರೇ ಪೋಷಕರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವುದು ವಿಪರ್ಯಾಸವಾಗಿದೆ ಎಂದರು.

ತಂದೆ ತಾಯಿ ಪೋಷಣೆ ಮಾಡದವರು ಪುಣ್ಯಸ್ಥಳಗನ್ನು ಸುತ್ತಿದರೂ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕೆಂದ ಅವರು, ಕಷ್ಟ ಸುಖಗಳಲ್ಲಿ ಅನ್ಯೋನ್ಯವಾಗಿ ಜೀವಿಸುವ ಪರಿಪಾಠವನ್ನು ಬೆಳಸಿಕೊಳ್ಳಬೇಕೆಂದು ನೂತನ ದಂಪತಿಗಳಿಗೆ ಸಲಹೆ ನೀಡಿದ ಅವರು, ಕೇಡು ನೆನಯ ಬೇಡ ಕೆಡುವೆ ಎಂಬ ಕನಕದಾಸ ವಾಣಿಯಂತೆ ಸೇವಾ ಕಾರ್ಯ ತೊಂದರೆ ಎದುರಾದರೂ ಹಿಂದೆ ಸರಿಯಬೇಡಿ ಎಂದು ತಿಳಿಸಿದರು.

ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಮದುವೆ ಎಂಬುದು ಜೀವನದ ಪ್ರಮುಖ ಘಟ್ಟವಾಗಿದ್ದು, ತಾಳಿ ಬಾಳುವ ಅರ್ಥವನ್ನು ನೂತನ ದಂತಿಗಳು ಅರಿತು ಉತ್ತಮ ಜೀವನ ಸಾಗಿಸಬೇಕೆಂದ ಅವರು, ಆಡಂಬರದ ಮದುವೆಗೆ ಸಾಲ ಮಾಡಿ ಕಷ್ಟ ಅನುಭವಿಸುವುದಕ್ಕಿಂತ ಸರಳ ವಿವಾಹವೇ ಲೇಸು ಎಂದು ನುಡಿದರು.

ನಗರ ಪ್ರದೇಶಗಳಲ್ಲಿ ಆಡಂಬರತೆಯಿಂದ ಮದುವೆಯಾದ ಜೋಡಿಗಳು ಸಹ ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಉತ್ತಮ ಸಂಬಂಧಗಳು ಇನ್ನು ಉಳಿದಿವೆ ಎಂದ ಅವರು, ಕಳೆದ 11 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸಾಮೂಹಿಕ ವಿಹಾಗಳನ್ನು ಆಯೋಜಿಸುತ್ತಿರುವ ನಾರಾಯಣಸ್ವಾಮಿ ಅವರ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಬೇಕಿದೆ. ನೂತನ ದಂಪತಿಗಳು ಗಿಡವನ್ನು ನಡುವ ಮೂಲಕ ವಿವಾಹ ನೆನಪನ್ನು ಅಚ್ಚಳಿಯದಂತೆ ಮಾಡಬೇಕಿದೆ. ಅಲ್ಲದೆ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಮೂಲಕ ಅವರ ಅಭಿವೃದ್ಧಿಗೆ ಬುನಾದಿ ಹಾಕಬೇಕೆಂದು ತಿಳಿಸಿದರು.

ಗಂಗರೆಕಾಲುವೆ ನಾರಾಯಣಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ಬಡ ಕುಟುಂಬಳಿಗೆ ವಿವಾಹ ಕಾರ್ಯ ನೆರವೇರಿಸುವುದು ಅತ್ಯಂತ ಕಷ್ಟವಾಗಿದ್ದು, ಮದುವೆಗೆಂದು ಸಾಲ ಮಾಡಿ, ಬಳಿಕ ಸಾಲದ ಸುಳಿಗೆ ಸಿಕ್ಕಿ ತತ್ತರಿಸುತ್ತಾರೆ. ಇಂತ ಬಡ ಕುಟುಂಬಗಳ ಆಸರೆಯಾಗಿ ಸಾಮೂಹಿಕ ವಿವಾಹ ಸಮಾರಂಬ ಆಯೋಜಿಸಲಾಗುತ್ತಿದೆ. ಹಾಗೂ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಮಾಜದ ಆರಿವು ಮೂಡಿಸುವ ಪ್ರಯತ್ನ ಕೂಡ ಇದಾಗಿದೆ ಎಂದರು.  

ವಸ್ತ್ರ, ತಾಳಿ, ಕಾಲುಂಗುರದೊಂದಿಗೆ ಕೆಲ ಗೃಹೋಪಯೋಗಿ ವಸ್ತುಗಳನ್ನು ನೂತನ ಜೋಡಿಗಳಿಗೆ ನೀಡಲಾಯಿತು. ವಿಧಾನಸಭೆ ಉಪ ಸಭಾಪತಿ ಎನ್.ಎಚ್. ಶಿವಶಂಕರರೆಡ್ಡಿ, ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ಎನ್. ಸಂಪಂಗಿ, ಎಂ.ಸಿ. ಸುಧಾಕರ್, ಕೆವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ವಿ. ನವೀನ್‍ಕಿರಣ್ ಗೊಲ್ಲಹಳ್ಳಿ ಶಿವಪ್ರಸಾದ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News