×
Ad

ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರ್ಪಡೆಗೊಳಿಸುಂತೆ ಆಗ್ರಹಿಸಿ ಧರಣಿ

Update: 2017-11-02 22:44 IST

ಚಿಕ್ಕಬಳ್ಳಾಪುರ,ನ.2: ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರ್ಪಡೆಗೊಳಿಸುಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಜಿಲ್ಲಾ ಮಡಿವಾಳ ಸಂಘದಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ನೂತನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಬೃಹತ್ ಸಂಖ್ಯೆಯಲ್ಲಿ ಜಮಾವಣೆಗೊಂಡ ಮಡಿವಾಳ ಸಮುದಾಯದವರು, ಕಾಲ್ನಡಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸುವ ಮೂಲಕ ಸಮುದಾಯದ ನ್ಯಾಯ ಸಮ್ಮತ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಎಚ್.ವಿ. ನಾಗರಾಜ್, ರಾಜ್ಯಾದಂತ ಸುಮಾರು 18 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಮಡಿವಾಳ ಸಮುದಾಯವು, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿದಿದ್ದರೂ, ಸಮುದಾಯ ಏಳಿಗೆಗೆ ಸರ್ಕಾರ ಪೂರಕವಾಗಿ ಸ್ಪಂಧಿಸದಿರುವುದು ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ ದೇಶದ 18 ರಾಜ್ಯಗಳು ಸೇರಿದಂತೆ 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಲಾಗಿದೆ. ಅಂತೆಯೇ ರಾಜ್ಯದಲ್ಲಿಯೂ ಮಡಿವಾಳರನ್ನು ಎಸ್‍ಸಿ ಪಟ್ಟಿಗೆ ಸೇರ್ಪಡೆಗೊಳಿಸಲು ಶೀಫಾರಸ್ಸು ಮಾಡುವಂತೆ ಸಮುದಾಯದಿಂದ ಹಲವು ಬಾರಿ ಹೋರಾಟಗಳನ್ನು ನಡೆಸಿದರೂ ರಾಜ್ಯ ಸರ್ಕಾರಗಳು ಬೇಡಿಕೆಯನ್ನು ಪುರಸ್ಕರಿಸದೇ ಜನಾಂಗವನ್ನು ನಿರ್ಲಕ್ಷಿಸಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಅಲ್ಲದೆ ಡಾ. ಅನ್ನಪೂರ್ಣಮ್ಮ ಅವರ ವರದಿಯ ಅನುಸಾರ ರಾಜ್ಯದಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು ಆಗ್ರಹಿಸಿ ರಾಜ್ಯ ಮಟ್ಟದ ಸಮಾವೇಶಗಳಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಸಮುದಾಯ ಬೇಡಿಕೆಯನ್ನು ಈಡೇರಿಸಲು ಪೂರಕ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ನೀಡಿದ ಭರವಸೆಯನ್ನು ಇದುವರೆಗೂ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನಾದರೂ ರಾಜ್ಯಸರ್ಕಾರವು ಜನಾಂಗದ ಏಳಿಗೆಯ ಹಿತದೃಷ್ಟಿಯಿಂದ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದ ಅವರು, ಇಲ್ಲವಾದಲ್ಲಿ ಬೇಡಿಕೆ ಈಡೇರುವವರೆಗೂ ರಾಜ್ಯದ್ಯಂತ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ. ಶೇಖರ್ ಬಾಬು, ಪ್ರಧಾನ ಕಾರ್ಯದರ್ಶಿ ಕೆ.ಎಲ್. ವೆಂಕಟರಾಮಯ್ಯ, ಎಚ್.ಎನ್. ಮುನಿಶಾಮಪ್ಪ, ಚಿಂತಾಮಣಿ ಚಲಪತಿ, ಅಚ್ಚಪ್ಪ, ಮುರಳಿ, ಆರ್.ವಿ. ರಾಜಣ್ಣ, ಬಿ.ಎನ್. ವೆಂಕಟಾಚಲಪತಿ, ಮುನಿಶಾಮಪ್ಪ, ಸುರೇಶ್, ರಾಮಚಂದ್ರಪ್ಪ, ರಾಮಮೂರ್ತಿ, ಕೆ.ಎಸ್. ಅಶ್ವತ್ಥಪ್ಪ, ಪಾಪಣ್ಣ, ನರಸಿಂಹಮೂರ್ತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News