ಇಟ್ಟಿಗೆ ಗೂಡು ಕುಸಿತ: ಇಬ್ಬರು ಮೃತ್ಯು, ಓರ್ವ ಗಾಯ
ಶಿವಮೊಗ್ಗ, ನ. 3: ಟ್ರ್ಯಾಕ್ಟರ್‍ಗೆ ಇಟ್ಟಿಗೆ ಲೋಡ್ ಮಾಡುವ ವೇಳೆ ಇಟ್ಟಿಗೆ ಗೂಡು ಹಾಗೂ ಸಮೀಪದಲ್ಲಿಯೇ ಹಾಕಿದ್ದ ಶೆಡ್ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟು, ಮತ್ತೋರ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಮಂಡನೇಕೊಪ್ಪ ಗ್ರಾಮದಲ್ಲಿ ನಡೆದಿದೆ.
ರಾಗಿಗುಡ್ಡ ಬಡಾವಣೆಯ ನಿವಾಸಿ ರಾಜು (25) ಹಾಗೂ ಇಟ್ಟಿಗೆ ಗುಮ್ಮಿ ಮಾಲಕ ಮಂಜುನಾಥ್ ಎಂಬವರ ಪತ್ನಿ ದೇವಿ (35) ಮೃತಪಟ್ಟವರೆಂದು ಗುರುತಿಸಲಾಗಿದೆ. ಇದರಲ್ಲಿ ದೇವಿ ಸ್ಥಳದಲ್ಲಿಯೇ ಅಸುನೀಗಿದ್ದರೆ, ರಾಜು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಕುಮಾರ್ ಎಂಬ ಕಾರ್ಮಿಕ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಸಬ್ ಇನ್ ಸ್ಪೆಪೆಕ್ಟರ್ ಗಿರೀಶ್ ಭೇಟಿಯಿತ್ತು ಪರಿಶೀಲಿಸಿದರು.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಇಟ್ಟಿಗೆ ಗುಮ್ಮಿ ಮಾಲಕ ಹಾಗೂ ಟ್ರ್ಯಾಕ್ಟರ್ ಚಾಲಕ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ.
ಏನಾಯಿತು?: ಟ್ರ್ಯಾಕ್ಟರ್‍ಗೆ ಇಟ್ಟಿಗೆ ಲೋಡ್ ಮಾಡುವಾಗ ಚಾಲಕ ಮಂಜುನಾಥನು ಮತ್ತೊಂದು ಬದಿಗೆ ಟ್ರ್ಯಾಕ್ಟರ್ ತಿರುಗಿಸಿಕೊಂಡಿದ್ದಾನೆ. ಈ ವೇಳೆ ಟ್ರ್ಯಾಕ್ಟರ್ ಇಟ್ಟಿಗೆ ಗುಮ್ಮಿ ಹಾಗೂ ಸಮೀಪದಲ್ಲಿದ್ದ ಶೆಡ್‍ಗೆ ತಾಗಿದೆ. ಇದರಿಂದ ಶೆಡ್ ಹಾಗೂ ಗುಮ್ಮಿಯಲ್ಲಿದ್ದ ಇಟ್ಟಿಗೆಗಳು ಕಾರ್ಮಿಕರ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.