×
Ad

ತುಮಕೂರು: ಬಿಜೆಪಿ ರ್ಯಾಲಿಯಲ್ಲಿ ಕಾರ್ಯಕರ್ತರಿಂದ ಕಲ್ಲು ತೂರಾಟ

Update: 2017-11-03 23:05 IST

ತುಮಕೂರು, ನ.3: ಬಿಜೆಪಿಯ ಪರಿವರ್ತನಾ ರ್ಯಾಲಿಗೆ ತಾಲೂಕಿನ ಬಾಣಸಂದ್ರ ಗ್ರಾಮದಲ್ಲಿ ಚೌದ್ರಿ ನಾಗೇಶ್ ನೇತೃತ್ವದಲ್ಲಿ ಒಂದುಗೂಡಿದ್ದ ನೂರಾರು ಬಿಜೆಪಿ ಭಿನ್ನಮತೀಯ ಕಾರ್ಯಕರ್ತರು ರ್ಯಾಲಿಯ ವಾಹನಕ್ಕೆ ಕಲ್ಲು ತೂರಿರುವ ಘಟನೆ ನಡೆದಿದೆ.

ಪರಿವರ್ತನಾ ರ್ಯಾಲಿ ತುರುವೇಕೆರೆ ಪಟ್ಟಣದಲ್ಲಿ ಕಾರ್ಯಕ್ರಮ ಮುಗಿಸಿ ಬಾಣಸಂದ್ರ ಗ್ರಾಮಕ್ಕೆ ಆಗಮಿಸುತಿದ್ದ ವೇಳೆ, ತಮ್ಮ ಅಹವಾಲು ಸ್ವೀಕರಿಸಲು ಬಾರದ ರಾಜ್ಯಾಧ್ಯಕ ಬಿ.ಎಸ್.ಯಡಿಯೂರಪ್ಪ ಮತ್ತು ರ್ಯಾಲಿಯ ಸಂಚಾಲಕಿ ಶೋಭಾ ಕರಂದ್ಲಾಜೆ ಅವರ ಕಾರನ್ನು ನಾಗೇಶ್ ನೇತೃತ್ವದ ಬಿಜೆಪಿ ಭಿನ್ನಮತೀಯ ಕಾರ್ಯಕರ್ತರು ಅಡ್ಡಗಟ್ಟಿದರು. ಆದರೆ, ಯಡಿಯೂರಪ್ಪ ಮತ್ತು ಶೋಭಾ ಅವರು ಕಾರಿನಿಂದ ಇಳಿಯದ ಕಾರಣ, ಸ್ಕಾರ್ಪಿಯೋ ಕಾರನ್ನು  ಅಡ್ಡಗಟ್ಟಿ ಕಾರಿನ ಗ್ಲಾಸನ್ನು ಒಡೆದರು. ಇದರಿಂದ ಸ್ಥಳದಲ್ಲಿಯೇ ಇದ್ದ ಪೊಲೀಸ್ ಸಿಬ್ಬಂದಿ ಮತ್ತು ಕಾರ್ಯಕರ್ತರ ನಡುವೆ ಕೆಲಕಾಲ ತಳ್ಳಾಟ-ನೂಕಾಟ ನಡೆಯಿತು.

ಇದಕ್ಕೂ ಮುಂಚೆ ಪರಿವರ್ತನಾ ರಥವನ್ನು ತಡೆದು ನಿಲ್ಲಿಸಿದ್ದ ಕಾರ್ಯಕರ್ತರು ರಥ ಹೊರಡಲು ಮುಂದಾದಾಗ ರಥದ ಸ್ವಾಗತಕ್ಕೆಂದು ತಂದಿದ್ದ ತೆಂಗಿನ ಕಾಯಿಂದಲೇ ರಥಕ್ಕೆ ಒಡೆಯಲಾರಂಭಿಸಿದರು ರಥದ ವಾಹನದ ಮುಂದಿನ ಗ್ಲಾಸ್‍ಗೆ ತೆಂಗಿನ ಕಾಯಿ ತಗುಲಿ ಗಾಜು ಒಡೆಯಿತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ರಥ ಮುಂದೆ ಹೋಗಲು ಅನುವು ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News