ಮಡಿಕೇರಿ: ನ.8ಕ್ಕೆ ‘ಸಂಪಾಜೆಗೆ ಪೋಯಿ’ ಕಾಲ್ನಡಿಗೆ ಜಾಥಾ
ಮಡಿಕೇರಿ, ನ.3: ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕಳೆದ ಮೂರೂವರೆ ವರ್ಷಗಳಿಂದ ರಾಷ್ಟ್ರದ ಜನತೆಗೆ ಸಾವಿರಾರು ಸುಳ್ಳುಗಳನ್ನು ಹೇಳಿದ್ದಾರೆ. ಪ್ರಧಾನಿ ವಿರುದ್ಧ ಜನಾಂದೋಲನ ರೂಪವಾಗಿ ನಾಪೊಕ್ಲು ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನ.8ರಂದು ಸುಳ್ಯದಿಂದ ಸಂಪಾಜೆಯವರೆಗೆ ‘ಸಂಪಾಜೆಗೆ ಪೆಯಿ’ ಬೃಹತ್ ಕಾಲ್ನಡಿಗೆ ಜಾಥಾವನ್ನು ಆಯೋಜಿಸಲಾಗಿದೆ ಎಂದು ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ರಮಾನಾಥ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲ್ನಡಿಗೆ ಜಾಥಾವನ್ನು ಅಂದು ಬೆಳಗ್ಗೆ 9 ಗಂಟೆಗೆ ಸುಳ್ಯದಲ್ಲಿ ರಾಜ್ಯ ಅರಣ್ಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಉದ್ಘಾಟಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸದಸ್ಯರಾದ ಡಾ.ರಘು, ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥ್, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಸ್.ಶಂಕರ್, ಎಮ್ಮೆಲ್ಸಿ ವೀಣಾ ಅಚ್ಚಯ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಮಾಜಿ ಎಮ್ಮೆಲ್ಸಿ ಅರುಣ್ ಮಾಚಯ್ಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಸಂಪಾಜೆಯಲ್ಲಿ ಜಾಥ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಯು. ಹ್ಯಾರಿಸ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ, ಉಪಾಧ್ಯಕ್ಷ ರಾಘವೇಂದ್ರ, ಸಂಪಾಜೆ ಕಾಂಗ್ರೆಸ್‌ನ ಪಿ.ಎಲ್. ಸುರೇಶ್ ಹಾಗೂ ಭಾಗಮಂಡಲದ ಸುನಿಲ್ ಪತ್ರಾವೋ ಉಪಸ್ಥಿತರಿದ್ದರು.