ಮಧುಬಂಗಾರಪ್ಪ ಪಾದಯಾತ್ರೆ ಜನರ ದಿಕ್ಕು ತಪ್ಪಿಸುವ ಪ್ರಯತ್ನ: ಶ್ರೀಧರ್
ಸೊರಬ, ನ.3: ತಾಲೂಕಿನ ನಿರಾವರಿ ಯೋಜನೆಗಳ ಬಗ್ಗೆ ವಿಧಾನಸಭೆಯಲ್ಲಿ ಯಾವುದೇ ಪ್ರಸ್ತಾವ ಸಲ್ಲಿಸದಿರುವ ಹಾಗೂ ಚರ್ಚಿಸದ ಶಾಸಕ ಮಧುಬಂಗಾರಪ್ಪ ಚುನಾವಣಾ ಸಂದಭರ್ದಲ್ಲಿ ಪಾದಯಾತ್ರೆಯ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದಾರೆ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಆರೋಪಿಸಿದ್ದಾರೆ.
ಶುಕ್ರವಾರ ಪಟ್ಟಣದ ಕಾಂಗ್ರೇಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1991ರಲ್ಲಿಯೇ ಆಡಳಿತಾತ್ಮಕ ಮಂಜೂರಾತಿ ಪಡೆದಿರುವ ತಾಲೂಕಿನ ಏತ ನೀರಾವರಿಗೆ ಸರಕಾರದಿಂದ ಹಣ ಬಿಡುಗಡೆಗಾಗಿ ಪ್ರಯತ್ನಿಸದೆ, ಈಗ ನೀರಾವರಿ ಹೆಸರಿನಲ್ಲಿ ಪಾದಯಾತ್ರೆಗೆ ಹೊರಟಿರುವುದು ಇದೊಂದು ಪಕ್ಕಾ ಚುನಾವಣಾ ಗಿಮಿಕ್ಕಾಗಿದೆ ಎಂದರು.
ಬಗರ್‌ಹುಕುಂ ಹೆಸರಿನಲ್ಲಿ ನಡೆಸಿದ ಪಾದಯತ್ರೆಯಿಂದ ಶಾಸಕರಾದ ಇವರು, ಯಾವುದೇ ಅರಣ್ಯವಾಸಿಗಳಿಗೆ ಹಕುಪತ್ರ ಕೊಡಿಸುವಲ್ಲಿ ವಿಫಲರಾಗಿದ್ದಾರೆ. 1998ರ ಕಾಯ್ದೆಯನ್ವಯ ಅರಣ್ಯನಿವಾಸಿಗಳಿಗೆ 3 ಎಕರೆ ಜಮೀನು ಮಂಜೂರು ಮಾಡಬಹುದಾಗಿದ್ದು, ಯಾವುದೇ ಬಡವರಿಗೆ ಜಮೀನು ಮಂಜೂರು ಮಾಡಿಲ್ಲ ಎಂದು ಆಪಾದಿಸಿದರು.
ಗೆಲುವಿಗೆ ಅನುಕಂಪದ ಅಲೆ ಕಾರಣ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಶಿವಾನಂದಪ್ಪಮಾತನಾಡಿ, ಕಳೆದ ಚುನಾವಣೆಯಲ್ಲಿ ಮಧುಬಂಗಾಪ್ಪ ಗೆಲುವಿಗೆ ಅನುಕಂಪದ ಅಲೆಕಾರಣವಾಗಿತ್ತು. ಬಗರ್ ಹುಕುಂನಲ್ಲಿ ನಡೆಸಿರುವ ಅಕ್ರಮ ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡದ ಇವರು, ಹಣವಂತರಿಗೆ ಹಕ್ಕುಪತ್ರ ನೀಡಿದ್ದು, ಯಾರದ್ದೋ ಜಮೀನು ಇನ್ಯಾರಿಗೋ ಬಗರ್‌ಹುಕುಂ ಮಂಜೂರು ಮಾಡಿ ತಾಲೂಕಿನ ಭದ್ರಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಗ್ರಾಮಸ್ಥರ ನಡುವಿನ ಸಾಮರಸ್ಯವನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗರ ಹಲ್ಲೆಗೆ ಖಂಡನೆ: ತಾಲೂಕಿನ ಆನವಟ್ಟಿ ಗ್ರಾಮದಲ್ಲಿ ಧರಣಿ ನಿರತರ ಬಳಿ ಮನವಿ ಸ್ವೀಕರಿಸಲು ತೆರಳಿದ್ದ ಗ್ರಾಪಂ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡ ರಾಜು ತಲ್ಲೂರು ಮತ್ತು ಆತನ ಸಂಗಡಿಗರು ನಡೆಸಿರುವ ಹಲ್ಲೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಜೆ.ಕೆರಿಯಪ್ಪ, ಚಿಕ್ಕಶಕುನ ಪರಸಪ್ಪ, ಡಿ.ಬಿ.ಅಣ್ಣಪ್ಪ, ಸುಜಾಯತ್‌ಉಲ್ಲಾ, ಇ.ಎಚ್.ಮಂಜುನಾಥ, ಜುಲ್ಫೀಕರ್, ಅಬ್ದುಲ್ ರಶೀದ್, ಸುಮಾ ಗಜಾನನ, ಶಿವಕುಮಾರ್ ಬಿಳಾವಗೋಡು ಮತ್ತಿತರರು ಉಪಸ್ಥಿತರಿದ್ದರು.