×
Ad

ಸರಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಶೌಚಾಲಯ ನಿರ್ಮಾಣಕ್ಕೆ 2 ಲಕ್ಷ ರೂ. ಅನುದಾನ

Update: 2017-11-03 23:43 IST

ಶಿಕಾರಿಪುರ, ನ.3: ಶಾಲೆ ಕಾಲೇಜುಗಳಿಗೆ ಶೌಚಾಲಯಗಳು ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ಪಟ್ಟಣದ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಸುಸಜ್ಜಿತ ಶೌಚಾಲಯಗಳ ನಿರ್ಮಾಣಕ್ಕೆ 2 ಲಕ್ಷ ರೂ. ಅನುದಾನವನ್ನು ನೀಡುವುದಾಗಿ ಶಾಸಕ ಬಿ.ವೈ ರಾಘವೇಂದ್ರ ಭರವಸೆ ನೀಡಿದ್ದಾರೆ.

ಶುಕ್ರವಾರ ಪಟ್ಟಣದ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿಗೆ ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಬಾಲಕಿಯರ ಶಾಲೆ ಕಾಲೇಜುಗಳಲ್ಲಿ ಶೌಚಾಲಯಗಳ ಅನಿವಾರ್ಯತೆ ಇದ್ದು, ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ. ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರ ಕಾಲೇಜಿನ ಶೌಚಾಲಯಗಳ ಬಾಗಿಲುಗಳು ಹಾಳಾಗಿರುವುದರಿಂದ ಹೊಸ ಬಾಗಿಲು ಸಹಿತ ಶೌಚಾಲಯ ಬಳಿ ಕಾಂಕ್ರೀಟ್ ಮೂಲಕ ಸ್ವಚ್ಛ ತೆಯನ್ನು ಕಾಪಾಡಲು ತುರ್ತಾಗಿ 2 ಲಕ್ಷ ರೂ.ಶಾಸಕರ ಅನುದಾನದಲ್ಲಿ ನೀಡುವುದಾಗಿ ತಿಳಿಸಿದರು.

ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಕೇಂದ್ರ ಸರ್ಕಾರದಿಂದ ತಾಲೂಕಿನ 20 ಶಾಲೆಗಳಿಗೆ ನೂತನ ಕೊಠಡಿ ನಿರ್ಮಾಣಕ್ಕಾಗಿ 10.20 ಕೋಟಿ ಮಂಜೂರಾಗಿದೆ ಎಂದ ಅವರು, ಗುತ್ತಿಗೆದಾರರು ಕಾಮಗಾರಿಯಲ್ಲಿ ರಾಜಿಯಾಗದೆ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ತಿಳಿಸಿದರು. 

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ವಸಂತಗೌಡ, ತಾ.ಪಂ ಮಾಜಿ ಅಧ್ಯಕ್ಷ ರೇವಣಪ್ಪ ಕೊಳಗಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಲಪ್ಪ, ಬಿಇಒ ಸಿದ್ದಪ್ಪ, ಮುಖ್ಯ ಶಿಕ್ಷಕ ನಾಗಾನಾಯ್ಕ, ಮುಖಂಡ ಸುಕೇಂದ್ರಪ್ಪ,ಅನ್ವರ್‌ಸಾಬ್, ಹನೀಫ್ ಸಾಬ್, ಪರಶುರಾಮ, ಪ್ರವೀಣ, ಜಗದೀಶ ಸಂದಿಮನೆ, ಜಯಣ್ಣ,ಸಕ್ರೆ ಸಂತೋಷ ಗುತ್ತಿಗೆದಾರ ಸುಮಂತ ಮತ್ತಿತರರು ಹಾಜರಿದ್ದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News