×
Ad

ದೇಶ ಭ್ರಷ್ಟಾಚಾರದಿಂದ ಮುಕ್ತವಾಗಬೇಕಾದರೆ ಜನತೆ ಅಮೂಲಾಗ್ರವಾಗಿ ಬದಲಾಗಬೇಕು: ಅಣ್ಣಾಮಲೈ

Update: 2017-11-04 17:43 IST

ಚಿಕ್ಕಮಗಳೂರು, ನ.4: ಮುಂದಿನ ಪೀಳಿಗೆ ಭ್ರಷ್ಟಾಚಾರದಿಂದ ಮುಕ್ತರಾಗಿ ನೆಮ್ಮದಿಯಿಂದ ಬದುಕಬೇಕಾದರೆ ಇಂದಿನ ಹಿರಿಯರು ಬದಲಾಗಬೇಕು ಎಂದು ಜಿಲ್ಲಾ ಪೋಲಿಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ಅಭಿಪ್ರಾಯಪಟ್ಟದ್ದಾರೆ.

ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಏರ್ಪಡಿಸಿದ್ದ 'ವಿಚಕ್ಷಣ ಜಾಗೃತಿ ಸಪ್ತಾಹ'ದ ಸಮಾರೋಪ ಸಮಾರಂಭದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ವಿಷಯ ಕುರಿತು ಮಾತನಾಡಿದ ಅವರು, ದೇಶ ಭ್ರಷ್ಟಾಚಾರದಿಂದ ಮುಕ್ತವಾಗಬೇಕಾದರೆ ಜನತೆ ಅಮೂಲಾಗ್ರವಾಗಿ ಬದಲಾಗಬೇಕು. ಈಗಿರುವ ಭ್ರಷ್ಟಾಚಾರ ನಮ್ಮ ಸಾವಿನ ಜತೆಗೆ ಕೊನೆಯಾಗಬೇಕು ಎಂದು ಹೇಳಿದರು.

ದೇಶದ ಜನಸಂಖ್ಯೆಯಲ್ಲಿ ಶೇ.71 ರಷ್ಟು 35 ವರ್ಷಕ್ಕಿಂತ ಕೆಳಗಿನವರು ಲಂಚ ನೀಡುವ ಮೂಲಕ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಾರೆ. ಅಧಿಕಾರಿಗಳಿಂದ ತಮ್ಮ ಕೆಲಸವನ್ನು ಬೇಗ ಮಾಡಿಸಿಕೊಳ್ಳಲು ಅಥವಾ ತಮ್ಮ ಪರವಾಗಿ ಮಾಡಿಸಿಕೊಳ್ಳಲು ಲಂಚ ನೀಡುತ್ತಾರೆ ಎಂದರು.

ಪರಿಸರ, ಸಮಾಜ ಮತ್ತು ಹಿರಿಯರು ಭ್ರಷ್ಟಾಚಾರಿಗಳಾಗಿದ್ದರೆ ಅದನ್ನು ನೋಡಿ ಮಕ್ಕಳು ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಹೆತ್ತವರು ಮೊದಲು ತಮ್ಮ ಜವಾಬ್ದಾರಿಯನ್ನು ಅರಿತು ಅಮೂಲಾಗ್ರವಾಗಿ ಬದಲಾಗಬೇಕು. ಅಲ್ಲದೆ, ತಮ್ಮ ಮಕ್ಕಳಿಗೆ ಬದುಕುವ ರೀತಿ ಮತ್ತು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಪ್ರತಿನಿತ್ಯ ಹೇಳಿಕೊಡಬೇಕು ಎಂದು ಸಲಹೆ ನೀಡಿದರು.

ಹೆತ್ತವರು ತಮ್ಮ ಮಕ್ಕಳನ್ನು ತಿದ್ದುವುದರಿಂದ ಅವರಿಗೆ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಮನಗಾಣಿಸುವುದರಿಂದ ಮುಂದಿನ ಪೀಳಿಗೆ ಭ್ರಷ್ಟಾಚಾರದಿಂದ ಮುಕ್ತವಾಗಲು ಸಾಧ್ಯವಾಗುತ್ತದೆ ಎಂದ ಅವರು, ದೇಶದ ಅಭಿವೃದ್ಧಿಯಲ್ಲಿ ರೈಲ್ವೆ ಇಲಾಖೆಯಷ್ಟೇ ಅಂಚೆ ಇಲಾಖೆಯ ಕೊಡುಗೆಯೂ ಪ್ರಮುಖವಾಗಿದೆ. ಪ್ರಸ್ತುತ ಆಧುನೀಕರಣದಿಂದಾಗಿ ಅಂಚೆ ಇಲಾಖೆ ಅಧಿಕಾರಿಗಳು ಹೊಸ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.

ಅಂಚೆ ಅಧೀಕ್ಷಕ ಎನ್.ರಾಘವೇಂದ್ರ ಮಾತನಾಡಿ, ಸಪ್ತಾಹದ ಅಂಗವಾಗಿ ಏಳು ದಿನಗಳ ಕಾಲ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ನಾಲ್ಕು ಗ್ರಾಮಗಳಲ್ಲಿ ಭ್ರಷ್ಟಾಚಾರ ವಿರೋಧಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ  ಸಹಾಯಕ ಅಂಚೆ ಅಧೀಕ್ಷಕ ಎನ್.ರಮೇಶ್, ಮಾರುಕಟ್ಟೆ ವಿಭಾಗದ ಅಧಿಕಾರಿ ಎಂ.ಆರ್.ಜಮೀಲ್, ನಾಗಭೂಷಣ್, ವಿಶ್ವೇಶ್ವರ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News