×
Ad

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರ ಧರಣಿ

Update: 2017-11-04 22:29 IST

ಮಂಡ್ಯ, ನ.4: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಬೃಹತ್ ಧರಣಿ ನಡೆಸಿದರು.

ಸರಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಕುತ್ತಿಗೆಯಲ್ಲಿ ತನ್ನ ಸಾವಿಗೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣರೆಂಬ ಫಲಕ ಹಾಕಿಕೊಂಡಿರುವ ರೈತರೊಬ್ಬರು, ರೈತರ ಆತ್ಮಹತ್ಯೆಯ ಅಣಕು ಪ್ರದರ್ಶನವು ಮೆರವಣಿಗೆಯಲ್ಲಿ ಗಮನ ಸೆಳೆಯಿತು.

ಈ ವೇಳೆ ಧರಣಿನಿರತರರು ಮಾತನಾಡಿ, ಟನ್ ಕಬ್ಬಿಗೆ ಕನಿಷ್ಠ 3,500 ರೂ. ದರ ನಿಗದಿ ಮಾಡಬೇಕು. ಕೆಆರ್‍ಎಸ್, ಹೇಮಾವತಿ ಜಲಾಶಯ ವ್ಯಾಪ್ತಿಯ ಕೆರೆಕಟ್ಟೆಗಳನ್ನು ತುಂಬಿಸಿ ಬೇಸಗೆ ಬೆಳೆಗೆ ನೀರುಹರಿಸಬೇಕು ಎಂದು  ಒತ್ತಾಯಿಸಿದರು.

ರೈತರ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಪಡಿಸಿ ರೈತರ ಮತ್ತು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಎಲ್ಲ ಸಾಲ ಮನ್ನಾ ಮಾಡಬೇಕು. ಜೀವನ ನಿರ್ವಹಣೆಗೆ ಹೊಸದಾಗಿ ಸಾಲ ವಿತರಿಸಬೇಕು. ಬ್ಯಾಂಕ್‍ಗಳಲ್ಲಿ ಗಿರವಿ ಇಟ್ಟಿರುವ ಆಭರಣಗಳ ಹರಾಜು ಮಾಡಬಾರದು ಎಂದು ಆಗ್ರಹಿಸಿದರು.

ತೆಂಗು ಮತ್ತಿತರೆ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಪ್ರತಿ ಲೀಟರ್ ಹಾಲಿಗೆ 40 ರೂ. ನಿಗದಿಪಡಿಸಬೇಕು. ರೇಷ್ಮೆ ಗೂಡಿನ ಬೆಂಬಲ ಬೆಲೆ ಮುಂದುವರಿಸಬೇಕು. ಬೇಬಿಬೆಟ್ಟ ಸೇರಿದಂತೆ ಜಿಲ್ಲೆಯ ಎಲ್ಲ ಅಕ್ರಮ ಕಲ್ಲುಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇದಿಸಬೇಕು. ಗಣಿ ಕಾರ್ಮಿಕರಿಗೆ ಕೈಕುಳಿ ಮಾಡಿಕೊಂಡು ಜೀವನ ಸಾಗಿಸಲು ಅವಕಾಶ ನೀಡಬೇಕು ಎಂದು ತಾಕೀತು ಮಾಡಿದರು.

ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಅವೈಜ್ಞಾನಿಕ ಮತ್ತು ರೈತ ವಿರೋಧಿ ನೀತಿಗಳಿಂದ ಇಂದು ರೈತರ ಸರಣಿ ಆತ್ಮಹತ್ಯೆ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸತತ ಬರಗಾಲದಿಂದ ರೈತರು ಹೈರಾಣಾಗಿದ್ದು, ಗುಳೇ ಹೋಗುತ್ತಿದ್ದಾರೆ. ಪ್ರಸಕ್ತ ಕೇವಲ ಶೇ.10 ರಷ್ಟು ಮಾತ್ರ ಕೃಷಿ ಚಟುವಟಿಕೆ ಆರಂಭವಾಗಿದೆ. ರೈತರ ರಕ್ಷಣೆಗೆ ಮುಂದಾಗಬೇಕಾದ ಸರಕಾರಗಳು ಕಾರ್ಪೋರೇಟ್‍ಗಳ ಪರವಾಗಿ ನಿಂತಿವೆ ಎಂದು ಅವರು ಕಿಡಿಕಾರಿದರು.

ಸರಕಾರಗಳು ರೈತರ, ಕೃಷಿ ಕಾರ್ಮಿಕರ, ರೈತ ಮಹಿಳೆಯರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ನಿವಾರಣೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದ ಅವರು, ಇಲ್ಲವಾದರೆ, ಉಗ್ರ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷ ಕೋಣಸಾಲೆ ನರಸರಾಜು, ವಿಭಾಗೀಯ ಅಧ್ಯಕ್ಷ ಯರಗನಹಳ್ಳಿ ರಾಮಕೃಷ್ಣಯ್ಯ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಂದಿನಿ ಜಯರಾಂ, ಯಧುಶೈಲ ಸಂಪತ್, ಲತಾ ಶಂಕರ, ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ಜಿ.ಎಸ್.ಲಿಂಗಪ್ಪಾಜಿ, ಶಿವಳ್ಳಿ ಚಂದ್ರು, ಇಂಡುವಾಳು ಸಿದ್ದೇಗೌಡ, ಹಲ್ಲೇಗೆರೆ ಶಿವರಾಂ, ಹೆಮ್ಮಿಗೆ ಕೃಷ್ಣ, ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News