ಕ್ಷೌರಿಕ ಸಮುದಾಯಕ್ಕೆ ಅವಮಾನ: ಆರೋಪ
ಚಿಕ್ಕಮಗಳೂರು, ನ.3: ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ಪರಿವರ್ತನಾ ರ್ಯಾಲಿಯಲ್ಲಿ ಕ್ಷೌರಿಕರಿಗೆ ಅವಮಾನಿಸಿದ್ದು, ತಕ್ಷಣ ಅವರು ಕ್ಷೌರಿಕ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಸವಿತಾ ಬ್ರಿಗೇಡ್‌ನ ರಾಜ್ಯ ಸಂಚಾಲಕ ವಿಶ್ವನಾಥ್ ಮತ್ತು ಸವಿತಾ ಜಿಲ್ಲಾ ಸಂಚಾಲಕ ಜೆ.ಸತ್ಯನಾರಾಯಣ ಒತ್ತಾಯಿಸಿದ್ದಾರೆ.
ಈ ಬಗ್ಗೆ ಶನಿವಾರ ಜಂಟಿ ಹೇಳಿಕೆ ನೀಡಿರುವ ನಾಯಕರು, ಹಾಲಿ ಪ್ರತಿ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪಅವರು ತಮ್ಮ ಘಟನತೆಗೆ ತಕ್ಕಂತೆ ವರ್ತಿಸಬೇಕು. ಬಿಜೆಪಿ ಪರಿರ್ತನಾ ್ಯಾಲಿಯಲ್ಲಿ ಮಾತನಾಡುವಾಗ ಸವಿತಾ ಸಮಾಜದ ವೃತ್ತಿಯನ್ನು ಹಜಾಮ ಎನ್ನುವ ಮೂಲಕ ಸವಿತಾ ಸಮಾಜವನ್ನು ಅಪಮಾನಿಸಿದ್ದಾರೆ. ಇವರ ಬಾಲಿಶ ಹೇಳಿಕೆಯಿಂದ ಇಡೀ ರಾಜ್ಯ ಸವಿತಾ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಅವರು ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ‘ನಾನು ಈ ಹಿಂದೆ ರಾಜ್ಯದ ಇಂಧನ ಸಚಿವನಾಗಿದ್ದಾಗ ಗುಜರಾತಿಗೆ ಹೋಗಿದ್ದೆ, ಅಲ್ಲಿ ಎಲ್ಲಾ ಗ್ರಾಮಗಳಲ್ಲೂ ವಿದ್ಯುತ್ ಇತ್ತು, ಹಜಾಮನ ಅಂಗಡಿಯಲ್ಲೂ ವಿದ್ಯುತ್ ಇತ್ತು’ ಎಂದು ಸಮಾಜವನ್ನು ಹಿಯಾಳಿಸಿದ್ದಾರೆ. ರಾಜ್ಯ ಸರಕಾರ ಈ ಹಿಂದೆ ನಿಷೇಧಿಸಿದ್ದ ಹಜಾಮ ಎನ್ನುವ ಪದ ವನ್ನು ಬಹಿರಂಗವಾಗಿ ಬಳಸುವ ಮೂಲಕ ಇಡೀ ಕ್ಷೌರಿಕ ಸಮುದಾಯವನ್ನು ಅಪಮಾನಿಸಿದ್ದಾರೆ ಎಂದು ದೂರಿದ್ದಾರೆ.
ಇದು ಎಲ್ಲಾ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿ ರಾಜ್ಯದ್ಯಂತ ಸುದ್ದಿಯಾಗಿ ಜನಾಂಗದ ಆಕ್ರೋಶಕ್ಕೆ ಕಾರಣವಾಗಿದೆ. ಸವಿತಾ ಸಮಾಜದವರಿಂದ ಸೇವೆ ಪಡೆಯುವ ಇವರು ಅದೇ ಸಮುದಾಯವನ್ನು ಬಹಿರಂಗ ವೇದಿಕೆ ಗಳಲ್ಲಿ ತಮ್ಮ ಬಾಯಿ ಚಪಲಕ್ಕಾಗಿ ಹಿಯಾಳಿಸಿ ಮಾತನಾಡುವುದು ಎಷ್ಟು ಸರಿ ಎಂದು ೀಶ್ವರಪ್ಪ ಅವರನ್ನು ಪ್ರಶ್ನಿಸಿದ್ದಾರೆ.
ಈಶ್ವರಪ್ಪ ತಮ್ಮ ಸೋತ ಮನಸ್ಥಿತಿಯಿಂದ ನಾಲಿಗೆ ಸ್ಥಿಮಿತ ಕಳೆದುಕೊಂಡು ಮಾತ ನಾಡುವ ಮಾತಿನಿಂದ ಲಕ್ಷಾಂತರ ಸವಿತಾ ಸಮಾಜದವರ ಮನಸ್ಸಿಗೆ ನೋವಾಗಿದೆ. ಕೂಡಲೇ ಬಹಿರಂಗವಾಗಿ ಬೇಷರತ್ ಕ್ಷಮೆ ಯಾಚಿಸಬೇಕು. ತಪ್ಪಿದಲ್ಲಿ ರಾಜ್ಯಾಧ್ಯಂತ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.