ಕಾನೂನು ಇಲ್ಲದ ಕ್ಷೇತ್ರವಿಲ್ಲ: ನ್ಯಾ. ಸೋಮಶೇಖರ್ ಬಾದಾಮಿ
ಶಿವಮೊಗ್ಗ, ನ.4: ಆಡುಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಕಾನೂನು ಇಲ್ಲದ ಕ್ಷೇತ್ರವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಬಾದಾಮಿ ಹೇಳಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆಯಡಿ ಜಿಲ್ಲಾ ಮಟ್ಟದ ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ ಮತ್ತು ಜೀವನೋಪಾಯ ಹಾಗೂ ನಿಯಂತ್ರಣ ಕುರಿತು ನಗರಾಭಿವೃದ್ಧಿ ಕೋಶದ ವತಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾನೂನು ರಚನೆಮಾಡುವಾಗ ಅದರ ಸಾಧಕ ಬಾದಕಗಳನ್ನು ಕುಲಂಕಶವಾಗಿ ಅಧ್ಯಯನ ಮಾಡಿ, ಹೆಚ್ಚಿನ ಸಮೂಹಕ್ಕೆ ಅದರ ಲಾಭ ಸಿಗಬೇಕು ಎಂಬ ಉದ್ದೇಶದಿಂದ ಅದರ ರಚನೆಯಾಗುತ್ತದೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಕಾನೂನು ಇದ್ದು. ಸಾರ್ವಜನಿಕರು ಅದನ್ನು ಮೀರಿ ನಡೆಯುವಂತಿಲ್ಲ ಎಂದರು.
ನಮ್ಮ ದೇಶದ ಜನರಲ್ಲೂ ಅದೇರೀತಿ ಕರ್ತವ್ಯನಿಷ್ಠೆ, ಕಾನೂನು ಪಾಲನೆ ಇದ್ದರೆ ನಮ್ಮ ದೇಶವೂ ಮುಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇರುತ್ತಿತ್ತು ಎಂದ ಅವರು, ಸಂವಿಧಾನ ಒಂದು ಕಾನೂನು ರಚಿಸಿದರೆ ಅದರ ಪಾಲನೆ ಮಾಡಿದಾಗ ಮಾತ್ರ ರಚನೆಆಗಿರುವ ಕಾನೂನಿಗೂ ಒಂದು ಬೆಲೆ ಸಿಕ್ಕಂತಾಗುತ್ತದೆ ಎಂದರು.
ಬೀದಿ ಬದಿ ವ್ಯಾಪಾರಿಗಳು ಇಂದು ತಾವು ವ್ಯಾಪಾರ ಮಾಡುವ ಸ್ಥಳದಲ್ಲಿ ಅತಿ ಹೆಚ್ಚು ಪರಿಸರ ಹಾಳುಮಾಡುತ್ತಿದ್ದಾರೆ, ಅವರಿಗೆ ಈ ಕಾಯ್ದೆಯ ಅಡಿಯಲ್ಲಿ ಬೇರೆ ಸ್ಥಳಕ್ಕೆ ವರ್ಗಾಯಿಸಿ. ಅವರಿಗೆ ಪರಿಸರದ ಅರಿವು ಮೂಡುವಂತೆ ಮಾಡಬೇಕು ಎಂಬ ಅಧಿನಿಯಮ ಈ ಕಾಯ್ದೆಯಲ್ಲಿದೆ ಎಂದರು.
ಕಾನೂನು ರಚಿಸಿದರೆ ಅದನ್ನು ಪಾಲಿಸುವುದು ಜನರ ಕರ್ತವ್ಯವಾಗಿದೆ. ಜಪಾನ್‌ನಂತಹ ರಾಷ್ಟ್ರವು 40 ವರ್ಷಗಳ ಹಿಂದೆ ಪರಮಾಣು ಬಾಂಬ್ ದಾಳಿಯಿಂದ ಸಂಪೂರ್ಣವಾಗಿ ನಾಶವಾಗಿ ಹೋಗಿತ್ತು. ಆದರೆ ಆ ದೇಶದ ಸಾರ್ವಜನಿಕರ ದೇಶ ಪ್ರೇಮ, ಅತಃಕರಣ, ಕಾನೂನು ಪಾಲನೆಯಿಂದ ಇಂದು ಆ ರಾಷ್ಟ್ರ, ಜಗತ್ತಿನಲ್ಲೇ ಮುಂದುವರಿದ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆದಿದೆ ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ಏಳುಮಲೈ, ಆಯುಕ್ತ ಮುಲ್ಲೈಮುಹಿಲನ್, ಸಂಪನ್ಮೂಲ ವ್ಯಕ್ತಿ ವಿಶ್ವನಾಥ್ ಇನ್ನಿತರರಿದ್ದರು.