×
Ad

ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ರೈತ ಸಂಘದಿಂದ ಧರಣಿ

Update: 2017-11-04 23:05 IST

ಶಿವಮೊಗ್ಗ, ನ.4: ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಆಗ್ರಹಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯು ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದ ಮೂಲಕ ಎರಡೂ ಸರಕಾರಗಳಿಗೆ ಮನವಿ ಪತ್ರ ಸಲ್ಲಿಸಿತು.

ರೈತರ ಕೃಷಿಗೆ ಸಂಬಂಧಿಸಿದ ಮತ್ತು ಕೃಷಿ ಆಧಾರಿತ ಎಲ್ಲ ಸಾಲಗಳನ್ನು ಸರಕಾರಗಳೇ ತೀರುವಳಿ ಮಾಡಿಕೊಡಬೇಕು. ಬ್ಯಾಂಕ್ ಮತ್ತು ಫೈನಾನ್ಸ್‌ಗಳ ಸಿಬ್ಬಂದಿ ಸಾಲ ವಸೂಲಿ ಮಾಡಲು ಹಳ್ಳಿಗೆ ಬಾರದಂತೆ ಮತ್ತು ಕಾನೂನು ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಎಂ.ಎಸ್.ಸ್ವಾಮಿನಾಥನ್ ವರದಿಯಂತೆ ರೈತರ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ.50ರೂ. ಲಾಭಾಂಶ ಒಳಗೊಂಡಂತೆ ಭದ್ರತೆ ನೀಡಬೇಕು. ಬರಗಾಲ ಮತ್ತು ಅತಿವೃಷ್ಟಿಯಿಂದ ಸಾಕಷ್ಟು ಬೆಳೆಹಾನಿಯಾಗಿದ್ದು, ರೈತರ ಬದುಕು ದುಸ್ತರವಾಗಿದೆ. ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ, ಜಲಕ್ಷಾಮ ಉಂಟಾಗಿದೆ. ಕಷ್ಟದಲ್ಲಿರುವ ರೈತರ ಕಣ್ಣೀರು ಒರೆಸಲು ಕೇಂದ್ರ ಮತ್ತು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ.

ರೈತರ ಉತ್ಪನ್ನಗಳನ್ನು ಸಂಪೂರ್ಣ ತೆರಿಗೆ ಮುಕ್ತ ಮಾಡಬೇಕು. ಬರಮುಕ್ತ ಕೃಷಿ, ಸಾಲಮುಕ್ತ ಹಳ್ಳಿ, ದುಡಿಯುವ ಜನತೆಗೆ ಬಲ, ಯುವಜನರನ್ನು ಕೃಷಿಯತ್ತ ಸೆಳೆಯುವ ಯೋಜನೆ, ಕೃಷಿ ಆಧಾರಿತ ಉದ್ಯೋಗ ಸೃಷ್ಟಿಸುವ ಮೂಲಕ ಗ್ರಾಮೀಣ ಯುವಕ ಮತ್ತು ಯುವತಿಯರು ಮತ್ತೆ ಕೃಷಿಯತ್ತ ಮುಖ ಮಾಡುವಂತೆ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಿರಿಧಾನ್ಯಗಳನ್ನು ಬೆಳೆಯಲು ಮತ್ತು ಅವುಗಳನ್ನು ಆಹಾರವಾಗಿ ಬಳಸುವಂತೆ ಸರಕಾರ ಉತ್ತೇಜನ ನೀಡಬೇಕು. ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಿ, ಹೊಸಹಳ್ಳಿಗಳನ್ನು ಕಟ್ಟುವ ಯೋಜನೆ ರೂಪಿಸಬೇಕು. ಸಾಲಮನ್ನಾಕ್ಕೆ ಅರ್ಜಿ ಸಲ್ಲಿಸಿದವರ ಬಗ್ಗೆ ಗಮನಹರಿಸಿ ಸಂಪೂರ್ಣ ಸಾಲ ಮನ್ನಾಕ್ಕೆ ಕ್ರಮ ಕೈಗೊಳ್ಳಬೇಕು. ರೈತರ ಸಮಸ್ಯೆ ಬಗ್ಗೆ ಗಂಭೀರವಾಗಿ ಯೋಚಿಸಿ ಕ್ರಮಕೈಗೊಳ್ಳದಿದ್ದಲ್ಲಿ ಸರಕಾರದ ವಿರುದ್ಧ ರೈತರೇ ಗಂಭೀರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಂಘಟನೆ ಮನವಿಯಲ್ಲಿ ಎಚ್ಚರಿಕೆ ನೀಡಿದೆ.

ಈ ಸಂದಭರ್ದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಗೌಡ, ಸಿದ್ದವೀರಪ್ಪ ಈಚಲಘಟ್ಟ, ಕುರುವ ಗಣೇಶ್, ಇಂದುಧರ ಪಾಟೀಲ್, ಇಂದುಧರ ಅಂಗಡಿ, ಎಚ್.ಪಿ.ಸತೀಶ್, ವೈ.ಜಿ.ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News