ತಂಬಾಕಿನ ದುಷ್ಪರಿಣಾಮ ಅರಿತು ದೂರವಿರಿ: ರಮೇಶ್
ದಾವಣಗೆರೆ, ನ.4: ತಂಬಾಕನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ. ಆದರೆ, ಅದರಿಂದಾಗುವ ದುಷ್ಪರಿಣಾಮಗಳ ಅರಿತು ಅದರಿಂದ ದೂರವಿರುವುದು ಒಳಿತು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹೇಳಿದ್ದಾರೆ.
ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ಕರ್ನಾಟಕ ಮತ್ತು ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ನಗರದ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಪೊಲೀಸ್ ಸಿಬ್ಬಂದಿಗೆ ಮಾದಕ ವಸ್ತುವಿನ ನಿಯಂತ್ರಣ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತಾನಾಡಿದರು.
ಮಾದಕ ವಸ್ತುವಿನ ಸೇವನೆ ವ್ಯಕ್ತಿಗೆ ಆ ಸಮಯದಲ್ಲಿ ಖುಷಿ ನೀಡುತ್ತದೆ ಅಷ್ಟೇ. ಆದರೆ, ಮುಂದೆ ಆದರಿಂದ ಆಗುವ ಪರಿಣಾಮ ಭಯಂಕರವಾದದ್ದು. ತಂಬಾಕು ಸೇವನೆಯಿಂದ ಉಂಟಾಗುವ ಬಾಯಿಯ ಕ್ಯಾನ್ಸರ್ ರೋಗಿಗಳ ಚಿತ್ರಣವೇ ಬೀಭತ್ಸ, ಇನ್ನು ಅಂತಹ ಯಾತನೆಯನ್ನು ಅನುಭವಿಸುವುದು ಊಹಿಸಲು ಅಸಾಧ್ಯ. ಆದ್ದರಿಂದ ಇಂತಹ ವ್ಯಸನಗಳಿಂದ ದೂರವಿರಬೇಕು ಎಂದ ಅವರು, ತಂಬಾಕು ಸೇವನೆ, ಧೂಮಪಾನ, ಮದ್ಯಪಾನಂತಹ ವ್ಯಸನಿಗಳನ್ನು ಒಂದೇ ಸಲ ಅವುಗಳಿಂದ ದೂರ ಮಾಡುವುದು ಕಷ್ಟ. ಆದರೆ, ಹಂತ ಹಂತವಾಗಿ ಅವುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದಲ್ಲಿ ಕೊನೆಗೆ ವ್ಯಸನಿಗಳು ಅವುಗಳಿಂದ ಮುಕ್ತರಾಗುತ್ತಾರೆ. ಹಾಗಾಗಿ, ಸರಕಾರ ಇಂತಹ ಜಾಗೃತ ಕಾರ್ಯಕ್ರಮಗಳನ್ನು ಪ್ರತಿ ಜಿಲ್ಲೆಗಳಲ್ಲಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಪಿ ಡಾ.ಭೀಮಾಶಂಕರ ಎಸ್. ಗುಳೇದ್ ಮಾತನಾಡಿ, ಮಾದಕ ವಸ್ತುವಿನ ಕುರಿತಂತೆ ಇರುವ ಎನ್‌ಡಿಪಿಎಸ್ ಕಾಯ್ದೆ ಮತ್ತು ಕೋಟ್ಪಾ ಕಾಯ್ದೆ ಸಮಪರ್ಕವಾಗಿ ಅನುಷ್ಠಾನಗೊಳಿಸುವಲ್ಲಿ ಪೊಲೀಸರ ಪಾತ್ರ ಹೆಚ್ಚು. ಬಹುತೇಕ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಧೂಮಪಾನ, ಮದ್ಯಪಾನಿಗಳಾಗಿರುತ್ತಾರೆ. ಹಾಗಾಗಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೊದಲು ಇದರ ದುಷ್ಪರಿಣಾಮಗಳನ್ನು ಅರಿತು ನೈತಿಕವಾಗಿ ಇವುಗಳಿಂದ ಮುಕ್ತರಾಗಬೇಕು ಎಂದು ಹೇಳಿದರು.
ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ಕರ್ನಾಟಕ ಮತ್ತು ತಪೋವನ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಶಶಿಕುಮಾರ ವಿ.ಎಂ. ಮಾತನಾಡಿ, ರಾಜ್ಯಾದ್ಯಂತ ಮಾದಕ ವಸ್ತುವಿನ ನಿಯಂತ್ರಣ ಕುರಿತು ಜಾಗೃತ ಕಾರ್ಯಕ್ರಮ ಆಯೋಜಿಲಾಗಿದೆ ಎಂದರು.
ಎಸ್.ಎಸ್. ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ ಪ್ರೊ. ಡಾ.ವಿ.ಎಲ್. ಜಯಸಿಂಹ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಗಂಗಾಧರ್ ವರ್ಮ ಬಿ.ಆರ್., ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕಿ ಶೈಲಾಶ್ರೀ ಇತರರಿದ್ದರು.