ಜ.10ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಸೂಚನೆ

Update: 2017-11-04 18:25 GMT

ಹಾಸನ, ನ.4: ಶ್ರವಣಬೆಳಗೊಳದಲ್ಲಿ ಮುಂದಿನ ವರ್ಷ ಜರಗುವ ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಎಲ್ಲ ಇಲಾಖೆ ಅಧಿಕಾರಿಗಳು ಜ.10ರೊಳಗೆ ಪೂರ್ಣಗೊಳಿಸುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಹಾಮಸ್ತಕಾಭಿಷೇಕ ಸಂಬಂಧ ಕೈಗೊಂಡಿರುವ ಕಾಮಗಾರಿಗಳ ವೀಕ್ಷಣೆ ಬಳಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ, ಕೆಪಿಟಿಸಿಎಲ್, ತೋಟಗಾರಿಕೆ, ಆಗ್ನಿ ಶಾಮಕದಳ, ಕೆಎಸ್ಸಾರ್ಟಿಸಿ, ಪೊಲೀಸ್ ಇಲಾಖೆ ಮತ್ತಿತರ ಇಲಾಖೆಗಳ ಮೂಲಕ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ತ್ವರಿತವಾಗಿ ಪೂರ್ಣಗೊಳಿಸಿ ಮಹಾಮಸ್ತಕಾಭಿಷೇಕಕ್ಕೆ ಸಜ್ಜುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆದುಂದು ತಿಳಿಸಿದ ಅವರು, ಜ.15ರಂದು ಶ್ರವಣಬೆಳಗೊಳಕ್ಕೆ ಮತ್ತೆ ಭೇಟಿ ನೀಡುವುದಾಗಿ ತಿಳಿಸಿದರು.

ಮಹಾ ಮಸ್ತಕಾಭಿಷೇಕಕ್ಕೆ ಬಜೆಟ್‌ನಲ್ಲಿ 175 ಕೋಟಿ ರೂ. ಘೋಷಣೆ ಮಾಡಲಾಗಿದೆ. ಈ ಅನುದಾನವನ್ನು ಶೀಘ್ರ ಒದಗಿಸಲಾಗುವುದು ಎಂದ ಅವರು, ವಿಶ್ವವಿಖ್ಯಾತ ಮಹಾಮಸ್ತಕಾಭಿಷೇಕವನ್ನು ಜನಾಕರ್ಷಣೀಯವಾಗಿ ನಡೆಸುವ ಮೂಲಕ ಜನಮಾನಸದಲ್ಲಿ ಸದಾಕಾಲ ಉಳಿಯುವಂತಾಗಬೇಕು. ಫೆ.7ರಂದು ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಉದ್ಘಾಟನೆಗೆ ರಾಷ್ಟ್ರಪತಿ ಆಗಮಿಸಲಿದ್ದಾರೆ. ಮಹಾಮಸ್ತಕಾಭಿಷೇಕಕ್ಕೆ ಸಿದ್ಧಗೊಳುತ್ತಿರುವ ಅಟ್ಟಣಿಗೆ ಕಾಮಗಾರಿ ಶೇ.70 ರಷ್ಟು ಆಗಿದೆ. ಜರ್ಮನ್ ಟೆಕ್ನಾಲಜಿ ಬಳಸಿ ಅಟ್ಟಣಿಗೆ ನಿರ್ಮಿಸಲಾಗುತ್ತಿದ್ದು, ಮಹಾಮಸ್ತಕಾಭಿಷೇಕಕ್ಕೆ 40ಲಕ್ಷ ಯಾತ್ರಿಕರು ಬರುವ ನಿರೀಕ್ಷೆ ಇದೆ. ಯಾತ್ರಿಕರ ವಾಸ್ತವ್ಯಕ್ಕಾಗಿ 12 ಉಪ ನಗರಗಳ ನಿರ್ಮಾಣಕ್ಕೆ 490 ಎಕರೆ ಪ್ರದೇಶ ಸ್ವಾಧೀನಪಡಿಸಿಕೊಂಡು ಉಪ ನಗರ ನಿರ್ಮಾಣ ಮಾಡಲಾಗುತ್ತಿದೆ. ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ರೈತರಿಗೆ ಎರಡು ಬೆಳೆಯ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಅಮಿತ್ ಶಾ ಅವರದ್ದು ಹಿಟ್ ಆ್ಯಂಡ್ ರನ್ ಕೇಸು. ಕೇಂದ್ರ ಸರ್ಕಾರ ನೀಡುವ ಅನುದಾನದ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವುದು ಅನುದಾನ ಅಲ್ಲ. ಬದಲಾಗಿ ಅದು ನಮ್ಮ ಪಾಲು. ಕೇಂದ್ರದಿಂದ ರಾಜ್ಯಕ್ಕೆ ಎರಡು ರೂಪದಲ್ಲಿ ಹಣ ಬರುತ್ತದೆ. ಒಂದು ಅನುದಾನ. ಮತ್ತೊಂದು ತೆರಿಗೆಯಲ್ಲಿ ರೂಪದಲ್ಲಿ ಎಂದು ಹೇಳಿದರು.

ಕೇಂದ್ರ ಸರ್ಕಾರ ರಾಜ್ಯಗಳಿಂದ ವಿವಿಧ ರೂಪಗಳಲ್ಲಿ ತೆರಿಗೆ ಸಂಗ್ರಹ ಮಾಡುತ್ತದೆ. ಇದರಲ್ಲಿ ರಾಜ್ಯ ಸರ್ಕಾರಗಳ ಪಾಲು ಎಷ್ಟು ಎಂಬುದನ್ನು ಐದು ವರ್ಷಗಳಿಗೆ ಒಮ್ಮೆ ರಚನೆಯಾಗುವ ಹಣಕಾಸು ಆಯೋಗ ನಿರ್ಧಾರ ಮಾಡುತ್ತದೆ ಎಂದರು.

14ನೆ ಹಣಕಾಸು ಆಯೋಗದ ಶಿಫಾರಸು ಪ್ರಕಾರ ಕೇಂದ್ರ ಸರಕಾರ ಕಳೆದ ಐದು ವರ್ಷದಲ್ಲಿ ರಾಜ್ಯಕ್ಕೆ 1.86 ಲಕ್ಷ ಕೋಟಿ ರೂ. ಹಾಗೂ ಮೂರು ವರ್ಷದಲ್ಲಿ 96 ಸಾವಿರ ಕೋಟಿ ರೂ.ಕೇಂದ್ರ ನೀಡಬೇಕಿತ್ತು. ಆದರೆ, ಅದರಲ್ಲಿ 11 ಸಾವಿರ ಕೋಟಿ ರೂ. ಕಡಿಮೆಯಾಗಿದೆ.  ಇದನ್ನು ಮನಗಂಡ ಹಣಕಾಸು ಆಯೋಗ, ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ.42ರಷ್ಟನ್ನು ರಾಜ್ಯಕ್ಕೆ ಕೊಡಬೇಕೆಂದು  ಶಿಫಾರಸು ಮಾಡಿದೆ ಎಂದು ತಿಳಿಸಿದರು.

ಮಾರಾಟ ತೆರಿಗೆ, ಅಬಕಾರಿ, ಪೆಟ್ರೋಲ್, ಡೀಸೆಲ್‌ ಮೇಲಿನ ತೆರಿಗೆಯನ್ನು ಮಾತ್ರ ರಾಜ್ಯ ಸರ್ಕಾರ ಸಂಗ್ರಹಿಸುತ್ತದೆ. ಉಳಿದದ್ದನ್ನು ಕೇಂದ್ರ ಸರ್ಕಾರವೇ ಸಂಗ್ರಹಿಸಿ ತನ್ನ ಬಳಿ ಇಟ್ಟುಕೊಳ್ಳುತ್ತದೆ. ಆದರೆ, ಈ ವಿಚಾರ ತಿಳಿಯದ ಅಮಿತ್ ಶಾ ಅವರು, ಕೇಂದ್ರ ಸರಕಾರದ ಅನುದಾನವನ್ನು ನಮ್ಮ ಸರಕಾರ ಒಂದು ಧರ್ಮಕ್ಕೆ ಮೀಸಲಿಟ್ಟಿದೆ ಎಂಬರ್ಥದಲ್ಲಿ  ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಅನುದಾನವನ್ನು ನಾವು ಯಾವುದಕ್ಕೆ ದುಂದು ವೆಚ್ಚ ಮಾಡಿದ್ದೇವೆ ಎಂಬುದನ್ನು ಅಮಿತ್ ಶಾ ಅವರು ಸ್ಪಷ್ಟವಾಗಿ ವಿವರಣೆ ನೀಡಬೇಕು. ಕೇಂದ್ರ ಸರಕಾರವು ಹತ್ತು ಲಕ್ಷ ಕೋಟಿಗೂ ಹೆಚ್ವು ತೆರಿಗೆ ಸಂಗ್ರಹಿಸುವ ಹಣದಲ್ಲಿ ಬರೀ 1.86 ಲಕ್ಷ ಕೋಟಿ ರೂ. ನಮಗೆ ಸಿಗುತ್ತದೆ. ಅಂದರೆ ಶೇ.4.7 ಮಾತ್ರ ಎಂಬುದನ್ನು ತಿಳಿದುಕೊಂಡು ಅಮಿತ್ ಶಾ ಮಾತನಾಡಬೇಕು ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಸಿಎಂ ಕಲ್ಪಮೃತ ಮಳಿಗೆ, ಉಪ ನಗರ, ಪವರ್ ಸ್ಟೇಷನ್, ಶುದ್ಧ ನೀರಿನ ಘಟಕ, ಆಸ್ಪತ್ರೆ, ಬಸ್ ನಿಲ್ದಾಣ, ಕಲ್ಯಾಣಿ ಮತ್ತಿತರ ಅಭವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ನಡೆಸಿದರು.

ಈ ಸಂದರ್ಭದಲ್ಲಿ ಸಚಿವ ಮಂಜು, ಶಾಸಕರಾದ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಗೋಪಾಲಕೃಷ್ಣ, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ವಿಶೇಷಾಧಿಕಾರಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.

'1 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿ'

ಶ್ರವಣಬೆಳಗೊಳಕ್ಕೆ ಸಂಪರ್ಕ ಕಲ್ಪಿಸುವ 14 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರು, ಹೊಸ ನಗರಗಳಿಗೆ ಯುಜಿಡಿ, ಆರೋಗ್ಯ ಸೇವೆಗಾಗಿ 15 ಕಡೆಗಳಲ್ಲಿ ಕ್ಲಿನಿಕ್ ತೆರೆಯಲಾಗುವುದು. ಪ್ರತೀ ಕ್ಲಿನಿಕ್‌ನಲ್ಲಿ ಮೂರು ವೈದ್ಯರಿದ್ದು, 5 ಆ್ಯಂಬುಲೆನ್ಸ್ ಬಳಸಿಕೊಳ್ಳಲಾಗುವುದು. ಯಾತ್ರಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಲಾಗುವುದು. ವಸ್ತು ಪ್ರದರ್ಶನ ಪ್ರಾಧಿಕಾರದಿಂದ ವಸ್ತು ಪ್ರದರ್ಶನ ಮಳಿಗೆ ನಿರ್ಮಾಣ, ಅಂತಾರಾಷ್ಟ್ರೀಯ ಖ್ಯಾತ ಕಲಾವಿದರನ್ನು ಆಹ್ವಾನಿಸಿ ಸಂಗೀತ, ಜನಪದ ನೃತ್ಯ ಮತ್ತಿತರ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. 1 ಕೋಟಿ ರೂ. ವೆಚ್ಚದಲ್ಲಿ ಹಾಸನದ ಸೀಲ್ವರ್ ಜ್ಯೂಬಿಲಿ ಪಾರ್ಕ್ ಅಭಿವೃದ್ಧಿ ಪಡಿಸಲಾಗುವುದು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News