×
Ad

ಬಿಜೆಪಿ ಜಿಲ್ಲಾಧ್ಯಕ್ಷರಿಂದ ಸೇಡಿನ ರಾಜಕಾರಣ : ಸೊಗಡು ಶಿವಣ್ಣ ಆಕ್ರೋಶ

Update: 2017-11-05 18:01 IST

ತುಮಕೂರು, ನ.6: ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಗುತ್ತಿಗೆ ಹಿಡಿದವರಂತೆ ನಿಷ್ಠಾವಂತ ಕಾರ್ಯಕರ್ತರ ಮೇಲೆ ಸೇಡಿನ ರಾಜಕಾರಣ ನಡೆಸುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಹಾಗೂ ಅವರ ತಂದೆ ಜಿ.ಎಸ್.ಬಸವರಾಜುರವರಿಂದ ಪಕ್ಷ ನೆಲ ಕಚ್ಚಲಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ ಕೆಲ ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲಿ ಜನಸಂಘದಿಂದ ಬಂದು, ತುರ್ತುಪರಿಸ್ಥಿತಿಯ ಕಾಲದಲ್ಲಿ ಜೈಲಿಗೆ ಹೋದರೂ ಪಕ್ಷವನ್ನು ಕಟ್ಟಿದ ತನ್ನಂತಹ ಅನೇಕ ಹಿರಿಯ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಪಕ್ಷದ ಕಾರ್ಯಕರ್ತರ ವಿರೋಧದ ನಡುವೆಯೂ ಬಿಎಸ್‌ವೈ ಕೃಪಾಕಟಾಕ್ಷದಿಂದ ಬಿಜೆಪಿಗೆ ಸೇರ್ಪಡೆಗೊಂಡ ಅಪ್ಪ, ಮಕ್ಕಳು, ಪಕ್ಷದಲ್ಲಿದ್ದುಕೊಂಡೇ ಮೀರ್‌ಸಾದಿಕ್‌ರಂತೆ ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಬಿಎಸ್‌ವೈ ಮಾತಿಗೆ ಬೆಲೆ ಕೊಟ್ಟು ಎಲ್ಲವನ್ನು ಸಹಿಕೊಂಡು ಬರಲಾಗಿತ್ತು. ಇನ್ನು ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ. ನಿಷ್ಠಾವಂತ ಕಾರ್ಯಕರ್ತರು ಬೇರೆ ನಿರ್ಧಾರ ಕೈಗೊಳ್ಳುವ ಮುನ್ನ ಪಕ್ಷದ ಮುಖಂಡರು ಎಚ್ಚೆತ್ತುಕೊಂಡು ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಮುಂದಾಗುವ ತೊಂದರೆಗಳಿಗೆ ಅಪ್ಪ, ಮಕ್ಕಳೇ ಹೊಣೆ ಎಂದರು.

 ಕಳೆದ 30-40 ವರ್ಷಗಳ ನಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ನೋಟಿಸ್ ಎನ್ನುವ ಪದ ಕೇಳಿದವನಲ್ಲ.ಆದರೆ ಅಪ್ಪ, ಮಕ್ಕಳು ಪಕ್ಷಕ್ಕೆ ಬಂದ ನಂತರ, ಕುಣಿಗಲ್, ತುರುವೇಕೆರೆ, ಗುಬ್ಬಿ, ತುಮಕೂರು ಸೇರಿದಂತೆ ಜಿಲ್ಲೆಯಲ್ಲಿ ಮೂಲದಿಂದ ಪಕ್ಷ ಕಟ್ಟಿದ ಹಿರಿಯ ಕಾರ್ಯಕರ್ತರಿಗೆ ನೊಟಿಸ್ ಜಾರಿಗೊಳಿಸಲಾಗುತ್ತಿದೆ. ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಬಿಎಸ್‌ವೈ ನಿಷ್ಠಾವಂತರನ್ನು ಮಲತಾಯಿ ಮಕ್ಕಳಂತೆ ಕಾಣುತ್ತಿದ್ದು, ಇದರಿಂದ ಬೇಸತ್ತ ಬಹುತೇಕರು ಇತ್ತೀಚೆಗೆ ಪಕ್ಷ ಆಯೋಜಿಸಿದ್ದ ಸಂಕಲ್ಪ ಯಾತ್ರೆ ಮತ್ತು ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಿಲ್ಲ.

ಶನಿವಾರ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಪಕ್ಷದ ಕಾರ್ಯಕರ್ತರಿಗಿಂತ ಹಣ ಪಡೆದು ರ್ಯಾಲಿಯಲ್ಲಿ ಭಾಗವಹಿಸಿದ್ದವರ ಸಂಖ್ಯೆಯೇ ಹೆಚ್ಚು, ತಲಾ 500, 1000 ರೂ. ನೀಡಿ ಸಾರ್ವಜನಿಕ ಸಭೆಗೆ ಜನರನ್ನು ಕರೆತರಲಾಗಿತ್ತು ಎಂದು ಎಸ್.ಶಿವಣ್ಣ ಆರೋಪಿಸಿದರು.

ಶನಿವಾರ ಬೆಳಗ್ಗೆ 9 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಪೋನ್ ಮಾಡಿದ್ದು ನಿಜ. 11 ಗಂಟೆಗೆ ಕಾರ್ಯಕ್ರಮ ಇಟ್ಟುಕೊಂಡು 9ಕರೆ ಮಾಡಿದರೆ ಹೇಗೆ ಭಾಗವಹಿಸಲಿ ಎಂದು ಪ್ರಶ್ನಿಸಿದ ಅವರು, ತಾನು ಎಂದಿಗೂ ಪಕ್ಷವನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಂಡವನಲ್ಲ.ಇದು ತನ್ನೊಬ್ಬನ ಧ್ವನಿಯಲ್ಲ, ಇಡೀ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರ ದ್ವನಿ. ತಾನು ಕಾರ್ಯಕರ್ತರಿಗೆ ವಿಷ ಉಣಿಸಲು ತಯಾರಿಲ್ಲ. ಬಿಜೆಪಿಯ ಮೇಲೆ ದ್ವೇಷ, ಕೆಜೆಪಿ ಮೇಲಿನ ಪ್ರೀತಿಯನ್ನು ಬಿಎಸ್‌ವೈ ಮತ್ತು ಅಪ್ಪ, ಮಕ್ಕಳು ಬಿಡುವವರೆಗೂ ತಾವು ಅವರೊಂದಿಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸರಿಯಲ್ಲ. ರಾಜ್ಯದಲ್ಲಿ ಪರಿವರ್ತನಾ ರ್ಯಾಲಿ ವಿಫಲವಾಗಿದ್ದರೆ ಅದಕ್ಕೆ ಕೆಜೆಪಿಯ ಮೇಲಿನ ಪ್ರೀತಿಯೇ ಕಾರಣ ಎಂದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪರಿವರ್ತನಾ ರ್ಯಾಲಿಯಲ್ಲಿ ಎಲ್ಲಿಯೂ ಅಭ್ಯರ್ಥಿಗಳ ಘೋಷಣೆ ಮಾಡದಂತೆ ಎಚ್ಚರಿಕೆ ನೀಡಿದ್ದರೂ ಅದನ್ನು ಉಲ್ಲಂಘನೆ ಮಾಡಿ, ತುರುವೇಕೆರೆ ಮತ್ತು ತುಮಕೂರಿನಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಅಪ್ಪ, ಮಕ್ಕಳ ಒತ್ತಾಯಕ್ಕೆ ಮಣಿದು ಬಿಎಸ್‌ವೈ ಈ ಕೆಲಸ ಮಾಡುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ರಾಷ್ಟ್ರೀಯ ಅಧ್ಯಕ್ಷರ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗಿದೆ ಎಂದ ಎಸ್.ಶಿವಣ್ಣ, ಮುಂಬರುವ 2018ರ ಚುನಾವಣೆ ಯಲ್ಲಿ ತಾನು ತುಮಕೂರು ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿಯೇ ಕಣದಲ್ಲಿರುತ್ತೇನೆ. ಆ ವಿಶ್ವಾಸ ತನಗಿದೆ.ಇದಕ್ಕೆ ಪಕ್ಷದ ಮುಖಂಡರು ಅನುವು ಮಾಡಿಕೊಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಬಿ.ನಂದೀಶ್, ಶಾಂತರಾಜು, ಪಂಚಾಕ್ಷರಯ್ಯ, ಕೆ.ಜಿ.ವಿರೂಪಾಕ್ಷ, ಗೋಪಾಲಕೃಷ್ಣ, ಚಾಂದು, ಟಿ.ಕೆ.ಸನತ್, ಕೆ.ಪಿ.ಮಹೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News