×
Ad

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳು : ಮಧುಬಂಗಾರಪ್ಪ

Update: 2017-11-05 18:12 IST

ಸೊರಬ,ನ.5 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳು, ಕಾಂಗ್ರೆಸ್ ಸರ್ಕಾರ ಎಲ್ಲಾ ಭಾಗ್ಯಗಳನ್ನು ನೀಡುವ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದು ಈ ವರೆಗೂ ಯಾವುದೇ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಿಲ್ಲ, ಹುಸಿ ಭರವಸೆಗಳನ್ನು ನೀಡುವ ಮೂಲಕ ಜನರ ಮೂಗಿಗೆ ತುಪ್ಪ ಹಚ್ಚುತ್ತಿವೆ ಎಂದು ಶಾಸಕ ಮಧುಬಂಗಾರಪ್ಪ ಲೇವಡಿ ಮಾಡಿದರು.

ರವಿವಾರ ಕುಬಟೂರು ಗ್ರಾಮದ ದ್ಯಾಮವ್ವ ದೇವಾಲಯದ ಆವರಣದಲ್ಲಿ ಜಿಲ್ಲೆಯ ಸಮಗ್ರ ನೀರಾವರಿ ಅನುಷ್ಟಾನ ಹಾಗೂ ಅರಣ್ಯ ಹಕ್ಕು ನಿವಾಸಿಗಳ ನಿವೇಶನಗಳಿಗೆ ಹಕ್ಕು ಪತ್ರ ಒದಗಿಸುವಂತೆ ಒತ್ತಾಯಿಸಿ ಕುಬಟೂರು ಕೆರೆಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿಯವರೆಗೆ ಜೆ.ಡಿ.ಎಸ್ ಪಕ್ಷದಿಂದ ಹಮ್ಮಿಕೊಂಡ ಬೃಹತ್ ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದರು.

ಪಾದಯಾತ್ರೆ ಮಧುಬಂಗಾರಪ್ಪನವರ ವೈಯಕ್ತಿಕ ಸಮಸ್ಯೆ ನೀಗಿಸಲು ಅಲ್ಲ. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಶಂಕುಸ್ಥಾಪನೆ ನೆರವೇರಿಸಿ ಮಂಜೂರಾತಿ ಪಡೆದು ಪರಿಹಾರ ಕೂಡ ವಿತರಿಸಿದ ಮೂಡಿ-ಕುಣೇತೆಪ್ಪ, ಮೂಗೂರು, ಕಚವಿ ಏತ ನೀರಾವರಿ ಯೋಜನೆಗಳಿಗೆ ಈ ವರೆಗೂ ಅಧಿಕಾರ ಪಡೆದು ಮಂತ್ರಿಯಾದವರು ಪ್ರಯತ್ನಿಸಲೇ ಇಲ್ಲ. ಮಾಜಿ ಸಚಿವರಾದ ಹರತಾಳು ಹಾಲಪ್ಪ ಹಾಗೂ ಕುಮಾರ್ ಬಂಗಾರಪ್ಪ ಅಧಿಕಾರದಲ್ಲಿದ್ದಾಗ ನೀರಾವರಿಗಾಗಿ ಶ್ರಮಿಸಿಲ್ಲ.

ಹಾಲಪ್ಪ ಒಬ್ಬ ಅನಾಥ, ಅವರ ರಾಜಕಾರಣ ಅಲೆಮಾರಿ ಜೀವನದ ಟೂರಿಂಗ್‍ಟಾಕೀಸ್ ನಂತೆ. ಪದೇ ಪದೇ ಬದಲಾಯಿಸುತ್ತಾ ಹೋಗುತ್ತಿದೆ. ಇವರಿಗೆ ಅಧಿಕಾರ ಮುಖ್ಯವೇ ವಿನಃ ಕ್ಷೇತ್ರದ ಅಭಿವೃದ್ಧಿಅಲ್ಲ. ನಮ್ಮ ಅಣ್ಣ ಕುಮಾರ್‍ ಬಂಗಾರಪ್ಪ ದಾರಿತಪ್ಪಿದ ಮಗ. ಅವರು ಎಂದೋ ದಾರಿ ತಪ್ಪಿದ್ದಾರೆ. ಅದಕ್ಕಾಗಿ ಜನತೆಯು ಕೂಡ ತಾಲೂಕು ರಾಜಕಾರಣದಿಂದ ಹೊರಗಿಟ್ಟಿದ್ದಾರೆ, ಇಂತಹ ರಾಜಕಾರಣಿಗಳ ಅವಶ್ಯಕತೆ ನಮ್ಮ ತಾಲೂಕಿಗಿಲ್ಲ ಎಂದರು.

ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರಿದ ಮೊಟ್ಟ ಮೊದಲ ಮುಖ್ಯ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಯಡಿಯೂರಪ್ಪ ಇಂದು ಪರಿವರ್ತನಾ ರ್ಯಾಲಿಯ ನೇತೃತ್ವ ಹಸ್ಯಾಸ್ಪದವಾಗಿದೆ. ಹಸಿರು ಶಾಲು ಹೊತ್ತು ಮುಖ್ಯಮಂತ್ರಿ ಪದವಿ ಪಡೆದ ಅವರು ಹಾವೇರಿಯಲ್ಲಿ ರೈತರ ಮೇಲೆ ಗುಂಡು ಹಾರಿಸಿದ್ದೇ ಅವರ ಸಾಧನೆಯಾಗಿದೆ. ಈಗ ಬಗರ್‍ಹುಕುಂ ವಿಷಯ ಮಾತನಾಡುವ ಯಡಿಯೂರಪ್ಪನವರು ತಾವು ಮುಖ್ಯಮಂತ್ರಿಯಾಗಿದ್ದಾಗ ಶಿಕಾರಿಪುರದ ರೈತರ ಮೇಲೆ ಮೊಕದ್ದಮೆ ಹೂಡಿ 3 ತಿಂಗಳು ಜೈಲು ಶಿಕ್ಷೆ ಹಾಗೂ ರೂ 10 ಸಾವಿರ ದಂಡವನ್ನು ರೈತರಿಂದ ಕಟ್ಟಿಸಿದ್ದೇ ಇವರ ಆಡಳಿತದ ಮಹಾ ಸಾಧನೆಯಾಗಿದೆ ಎಂದರು. 

ಪಾದಯಾತ್ರೆಗೆ ಚಾಲನೆ ನೀಡಿ, ಭದ್ರಾವತಿ ಶಾಸಕ ಅಪ್ಪಾಜಿಗೌಡ ಮಾತನಾಡಿ ಇಂದಿನ ಮುಖ್ಯಮಂತ್ರಿಗಳಿಗೂ, ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಸಾಧನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಬಂಗಾರಪ್ಪನವರ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಇದಕ್ಕೆ ಉದಾಹರಣೆ 10 ಹೆಚ್.ಪಿ ವರೆಗೆ ರೈತರು ನೀರಾವರಿಗಾಗಿ ಪಡೆಯುವ ಉಚಿತ ವಿದ್ಯುತ್‍ನ್ನು ಸ್ಮರಿಸಬಹುದು ಎಂದರು. 

ಯಡಿಯೂರಪ್ಪನವರು ರಾಜ್ಯಕ್ಕೆ ಸಲ್ಲಬೇಕಾದ ಕನಿಷ್ಠ ಕಾರ್ಯಕ್ರಮಗಳನ್ನು ಕೇಂದ್ರದಿಂದ ತರುವ ಪ್ರಯತ್ನ ಮಾಡದೆ ರಾಜಕೀಯವಾಗಿ ವಿರೋಧ ಪಕ್ಷದ ವಿರುದ್ಧ ಗದಾಪ್ರಹಾರ ಮಾಡುತ್ತಲೆ ದಿನ ತಳ್ಳುತ್ತಿದ್ದಾರೆ. ರಾಜ್ಯದ ಹಿತಕ್ಕಾಗಿ ಜನಪ್ರತಿನಿಧಿಯಾಗಿ ಯಾವುದೇ ಕಾರ್ಯಗಳನ್ನು ಮಾಡದೆ ಪಕ್ಷ ಸಂಘಟನೆ ಹೆಸರಿನಲ್ಲಿ ಬೇರೆಯವರನ್ನು ನಿಂದಿಸುವುದೇ ಇವರ ರಾಜಕಾರಣವಾಗಿದ್ದು, ಇನ್ನೊಬ್ಬರಿಗೆ ಹೇಳುವ ಮೊದಲು ತಾವೇನು ಮಾಡಿದ್ದೇವೆ ಎಂದು ತಿಳಿಸಲಿ.

ಕಾಂಗ್ರೆಸ್ ಸರ್ಕಾರ ಬಂದು ನಾಲ್ಕೂವರೆ ವರ್ಷಗಳಾದರೂ ಸಮರ್ಪಕವಾಗಿ ರೇಶನ್‍ಕಾರ್ಡ ನೀಡಿಲ್ಲ, ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿ ಸಹಕಾರ ಸಂಘಗಳಲ್ಲಿನ ಕೇವಲ ರೂ. 50 ಸಾವಿರ ವರೆಗೆ ಸಾಲ ಮನ್ನಾ ಮಾಡಿ ಕೈ ತೊಳೆದುಕೊಂಡು ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದೆ ಉದ್ಯಮಿಗಳ ಸಾಲ ಮನ್ನಾ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು. 

ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ನಿರಂಜನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್, ಶಿವಮೊಗ್ಗ ನಗರ ಪಾಲಿಕೆಯ ಮಹಾಪೌರ ಏಳುಮಲೈ, ಸೊರಬ ಹಾಗೂ ಆನವಟ್ಟಿ ಜೆ.ಡಿ.ಎಸ್ ಘಟಕದ ಅಧ್ಯಕ್ಷರಾದ ಗಣಪತಿ, ಕೆ.ಪಿ ರುದ್ರಗೌಡ, ತಾಲ್ಲೂಕು ವಕ್ತಾರಎಂ.ಡಿ ಶೇಖರ್, ಜಿ.ಪಂ ಸದಸ್ಯರಾದ ವಿರೇಶ್‍ಕೊಟಗಿ, ಶಿವಲಿಂಗೇ ಗೌಡ್ರು, ತಾ.ಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯರಾದ ಅಂಜಲೀಸಂಜೀವ್, ಲತಾಸುರೇಶ್, ನರೇಂದ್ರಒಡೆಯರ್, ನಾಗರಾಜ್‍ಚಂದ್ರಗುತ್ತಿ, ಸುನೀಲ್‍ಗೌಡ, ಎ.ಪಿ.ಎಂ.ಸಿ ಅಧ್ಯಕ್ಷರಾಜುಕುಪ್ಪಗಡ್ಡೆ, ಉಪಾಧ್ಯಕ್ಷ ಜಯಶೀಲ ಗೌಡ ಹಾಗೂ ವಿವಿದಗ್ರಾಮದರೈತರು ಹಾಗೂ ಪಕ್ಷದ ಮುಖಂಡರು, ಕಾರ್ಯಕತ್ರರು ಪಾಲ್ಗೊಂಡಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News