ಕುರ್ಚಿಗಾಗಿ ಕೆಲ ಮುಖಂಡರಿಂದ ರಾಜಕೀಯ: ಸಚಿವ ಪಾಟೀಲ್
ಬೆಂಗಳೂರು/ಹುಬ್ಬಳ್ಳಿ, ನ. 5: ವೀರಶೈವ ಮಹಾಸಭಾದ ಕೆಲ ಮುಖಂಡರು ಕುರ್ಚಿಗಾಗಿ ರಾಜಕೀಯ ಮಾಡುತ್ತಿದ್ದು, ಹೀಗಾಗಿ ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ರವಿವಾರ ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ವೀರಶೈವರ ಬಳಿ ಬೌದ್ಧಿಕ ಬಂಡವಾಳ, ಸತ್ಯಾಂಶವಿಲ್ಲ. 900 ವರ್ಷಗಳಿಂದ ನಮ್ಮನ್ನು ಶೋಷಣೆ ಮಾಡುತ್ತ ಬಂದಿದ್ದಾರೆ. ಐತಿಹಾಸಿಕ ದಾಖಲೆಗಳು ಲಿಂಗಾಯತರ ಪರವಾಗಿ ಇವೆ. ಬಸವಣ್ಣನವರು ಸ್ಥಾಪಿಸಿದ ಧರ್ಮದಲ್ಲಿ ಜಾತಿ ಭೇದ, ಶೋಷಣೆ, ಅಸ್ಪೃಶ್ಯತೆ, ವರ್ಗ- ವರ್ಣ ಭೇದವಿಲ್ಲ ಎಂದರು.
ಲಿಂಗಾಯತ ಧರ್ಮದ 99 ಒಳ ಪಂಗಡಗಳಲ್ಲಿ ವೀರಶೈವ ಒಂದು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮುಂದೆ ಅವರು ವೀರಶೈವರು ಎಂದು ಹೇಳಲಿ. ನ್ಯಾಯಾಧೀಶರು ಶಟ್‌ಅಪ್ ನಾನ್‌ಸೆನ್ಸ್ ಗೆಟ್‌ಔಟ್ ಎನ್ನುತ್ತಾರೆ ಎಂದು ಪಾಟೀಲ್ ವ್ಯಂಗ್ಯವಾಡಿದರು.
ಕೆಲ ಮಠಾಧೀಶರು ಬಸವಣ್ಣನವರು ಬಿಟ್ಟು ಬಂದ ವೈದಿಕ ಪದ್ಧತಿ ಆಚರಿಸುತ್ತಾರೆ. ನಾವು ಹಿಂದೂಧರ್ಮದ ವಿರೋಧಿಗಳಲ್ಲ. ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಯಾರಿಗೂ ತೊಂದರೆಯಾಗಲ್ಲ ಎಂದ ಅವರು, ಪ್ರಭಾಕರ್ ಕೋರೆ ಲಿಂಗಾಯತರಿಗೆ ದ್ರೋಹ ಬಗೆಯುತ್ತಿದ್ದಾರೆ. ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಸಪ್ತಋಷಿಗಳಿಗೆ ದ್ರೋಹ ಮಾಡುತ್ತಿದ್ದಾರೆ. ಅವರು ಉಂಡ ತಟ್ಟೆಯಲ್ಲಿ ಹೇಸಿಗೆ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
ಪ್ರಭಾಕರ್ ಕೋರೆ ಗ್ರಾಮ ಪಂಚಾಯಿತಿಯಿಂದಲೂ ಆರಿಸಿ ಬರಲ್ಲ. ಅವರ ಊರು ಅಂಕಲಿಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ. ಕೆಎಲ್ಇ ಸಂಸ್ಥೆ ಲಿಂಗಾಯತರದ್ದು, ಬೆಂಬಲ ನೀಡದಿದ್ದರೆ ಸಂಸ್ಥೆಯಿಂದ ಖಾಲಿ ಮಾಡಿಸಬೇಕಾಗುತ್ತೆ. ಸ್ವಾಭಿಮಾನವಿದ್ದರೆ ಕೆಎಲ್ಇ ಬಿಟ್ಟು, ವೀರಶೈವ ಸಂಸ್ಥೆ ಹುಡುಕಿಕೊಂಡು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋರೆ ಅವರನ್ನು ಬಿಜೆಪಿಯವರು ಕೇಂದ್ರ ಮಂತ್ರಿ ಮಾಡಲ್ಲ. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರನ್ನು ಕರೆದರೂ ಸಮಾವೇಶಕ್ಕೆ ಬಂದಿಲ್ಲ. ಲಿಂಗಾಯತರ ಹೆಸರಲ್ಲಿ ಶಾಸಕ, ಮಂತ್ರಿ, ಮುಖ್ಯಮಂತ್ರಿ ಆಗಿದ್ದಾರೆ. ಈಗ ವೀರಶೈವರ ಬಾಲ ಹಿಡಿದುಕೊಂಡು ಓಡಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
ಡಿ.10ಕ್ಕೆ ವಿಜಯಪುರದಲ್ಲಿ ಲಿಂಗಾಯತ ಸಮಾವೇಶ ನಡೆಯಲಿದೆ. ಜನವರಿಯಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿವೇಚನೆಗೆ ತಕ್ಕಂತೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಶೀಘ್ರ ನಿರ್ಣಯ ಕೈಗೊಳ್ಳಬೇಕು ಎಂದು ಕೋರಿದರು.
‘ಪಂಚಪೀಠಾಧಿಪತಿಗಳು ಲಿಂಗಾಯತ ಸಮಾಜದ ಪೀಡಕರು. ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಮಹಾತ್ಮ ಗಾಂಧೀಜಿಯವರನ್ನು ಕೊಂದವರೇ, ಡಾ.ಎಂ.ಎಂ.ಕಲ್ಬುರ್ಗಿಯವರನ್ನು ಕೊಂದಿದ್ದಾರೆ. ಮನುಷ್ಯರ ಹೆಗಲ ಮೇಲೆ ಹತ್ತಿ ಮೆರೆಯುವವರನ್ನು ಕಲ್ಲಿಂದ ಹೊಡೆಯಬೇಕು’
-ಶಿವಯೋಗಿ ಸ್ವಾಮಿ ಸುಲಫಲ ಮಠ
‘ಬೌದ್ಧ. ಜೈನ, ಸಿಖ್ ಧರ್ಮದ ಮಾದರಿಯಲ್ಲೆ ‘ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ’ ನೀಡಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ’
-ಬಸವರಾಜ ಹೊರಟ್ಟಿ ಮೇಲ್ಮನೆ ಸದಸ್ಯ