×
Ad

ಸಾಹಿತ್ಯಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಿ ಯಶಸ್ವಿಗೊಳಿಸಿ: ಅಧಿಕಾರಿಗಳಿಗೆ ಸಚಿವ ಮಹದೇವಪ್ಪ ಸೂಚನೆ

Update: 2017-11-05 21:08 IST

ಮೈಸೂರು,ನ.5:  83ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನವೆಂಬರ್ 24,25 ಮತ್ತು 26ರಂದು ನಡೆಯಲಿದ್ದು,  ಅದ್ಧೂರಿ ಹಾಗೂ ಅರ್ಥಗರ್ಭಿತವಾಗಿ ನಡೆಸಲು ರಾಜ್ಯ ಸರ್ಕಾರವು 8 ಕೋಟಿ ರೂ. ಬಿಡುಗಡೆ ಮಾಡಿದೆ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಿ ಯಶಸ್ವಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೂಚಿಸಿದ್ದಾರೆ.

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ರವಿವಾರ  ಸಭೆ ನಢೆಸಿದ ಅವರು, ಇದೇ ತಿಂಗಳ 24 ರಿಂದ ಮೂರು ದಿನಗಳ ಕಾಲ ಮೈಸೂರಿನಲ್ಲಿ ಕನ್ನಡ ಜಾತ್ರೆ ನಡೆಯಲಿದ್ದು,ಈ ಸಂಬಂಧ ವೇದಿಕೆಗಳಿಗೆ ನಾಲ್ವಡಿ ಕೃಷ್ಣರಾಜರ ಸಭಾಂಗಣ, ಕುವೆಂಪು ವೇದಿಕೆ, ಮಲೆ ಮಹದೇಶ್ವರ ಮಹಾದ್ವಾರ ಎಂಬ ಹೆಸರಿಡಲು ತೀರ್ಮಾನಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂಪಾರನ್ನು ಅದ್ಧೂರಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲು ಮಲ್ಲಿಗೆ ಹೂವಿನ ರಥ ಸಿದ್ಧಪಡಿಸಲಾಗುವುದು. ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಮೆರವಣಿಗೆ ಆರಂಭವಾಗಲಿದ್ದು, ಇದರಲ್ಲಿ 600ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ.  ವಿವಿಧ ಕಲಾ ಪ್ರಕಾರಗಳು, ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ ಎಂದು ತಿಳಿಸಿದರು.

ವಸತಿ, ಸಾರಿಗೆ ಹಾಗೂ ಆಹಾರ ಸಮಿತಿಯ ಕೆಲಸಗಳು ಹೆಚ್ಚು ಮಹತ್ವದಾಗಿದ್ದು, ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳು ಹಾಗೂ ಸಾಹಿತಿಗಳು ವಾಸ್ತವ್ಯದ ಬಗ್ಗೆ ತಿಳಿದಿಕೊಳ್ಳಲು  ಬಸ್ ಹಾಗೂ ರೈಲ್ವೆ ನಿಲ್ದಾಣದ ಬಳಿ ಮಾಹಿತಿ ಕೇಂದ್ರ ಹಾಗೂ ಸಹಾಯವಾಣಿ ತೆರೆಯುವಂತೆ ತಿಳಿಸಿದರು.

ವಾಸ್ತವ್ಯಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲಾ ಕಾಲೇಜುಗಳ ಮುಖ್ಯಸ್ಥರೊಂದಿಗೆ, ಹೋಟೆಲ್ ಮಾಲೀಕರೊಂದಿಗೆ ಸಭೆ ನಡೆಸಿ ತೀರ್ಮಾನಗಳನ್ನು ಕೈಗೊಳ್ಳಿ. ವಾಸ್ತವ್ಯದ ಸ್ಥಳದಿಂದ ವೇದಿಕೆಗೆ ಆಗಮಿಸಲು ಬೇಕಿರುವ ಸಾರಿಗೆ ವ್ಯವಸ್ಥೆಯನ್ನು ಸಹ ಅಚ್ಚುಕಟ್ಟಾಗಿ ಕಲ್ಪಿಸಿ.  ಹಿರಿಯ ಸಾಹಿತಿಗಳು ಹಾಗೂ ಗಣ್ಯರಿಗೆ ಸಮನ್ವಯ  ಅಧಿಕಾರಿ ನಿಯೋಜಿಸುವಂತೆ ತಿಳಿಸಿದರು.

ವಿವಿಧ ಸಮಿತಿಗಳ ಮುಖ್ಯಸ್ಥರು ತಮ್ಮ ಸಮಿತಿಯಿಂದ ಮಾಡಿಕೊಂಡಿರುವ ಯೋಜನೆಗಳನ್ನು ವಿವರಿಸಿದರು.ಸಭೆಯಲ್ಲಿ ಶಾಸಕ ವಾಸು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹಮದ್, ಮೈಸೂರು ಮಹಾನಗರಪಾಲಿಕೆ ಮಹಾಪೌರ ಎಂ.ಜೆ. ರವಿಕುಮಾರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ. ಧ್ರುವಕುಮಾರ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಹೆಚ್.ಎ. ವೆಂಕಟೇಶ್ ಜಿಲ್ಲಾಧಿಕಾರಿ ರಂದೀಪ್ ಡಿ, ಅಪರ ಜಿಲ್ಲಾಧಿಕಾರಿ ಟಿ ಯೋಗೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News