ಟಿಪ್ಪು ಜಯಂತಿ : ಸೂಕ್ಷ್ಮ ಪ್ರದೇಶ ಕೊಡಗಿನ ಚೆಕ್‍ಪೋಸ್ಟ್ ಗಳಲ್ಲಿ ಪೊಲೀಸ್ ಹದ್ದಿನ ಕಣ್ಣು
ಮಡಿಕೇರಿ,ನ.5 :ರಾಜ್ಯ ಸರಕಾರದ ವತಿಯಿಂದ ಇದೇ ನ.10 ರಂದು ಟಿಪ್ಪು ಜಯಂತಿ ಆಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶವೆಂದೇ ಪರಿಗಣಿಸಲ್ಪಟ್ಟಿರುವ ಕೊಡಗು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಕೊಡಗು ಜಿಲ್ಲಾ ಪೊಲೀಸರು ಸಜ್ಜಾಗಿದ್ದಾರೆ.
ದಕ್ಷಿಣ ವಲಯದ ಐಜಿಪಿ ವಿಫುಲ್ ಕುಮಾರ್ ಅವರು ಮಡಿಕೇರಿಗೆ ಭೇಟಿ ನೀಡಿ ಎಸ್‍ಪಿ ಕಚೇರಿಯಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದರು. ಟಿಪ್ಪು ಜಯಂತಿ ಆಚರಣೆ ಸಂದರ್ಭ ಅಶಾಂತಿ ಮೂಡಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಮತ್ತೊಂದೆಡೆ ಎಸ್‍ಪಿ ರಾಜೇಂದ್ರಪ್ರಸಾದ್ ಅವರು ಕೇರಳ ರಾಜ್ಯದ ಕಣ್ಣೂರು, ವಯನಾಡ್, ಕಾಸರಗೋಡು ಹಾಗೂ ಹಾಸನ, ಮೈಸೂರು ಜಿಲ್ಲೆಗೆ ಹೊಂದಿಕೊಂಡಂತಹ 10 ಚೆಕ್‍ಪೋಸ್ಟ್ ಗಳಿಗೆ ಭೇಟಿ ನೀಡಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಟ್ಟಿನಲ್ಲಿ ನ.10 ರಂದು ಟಿಪ್ಪು ಜಯಂತಿ ಆಚರಣೆ ನಡೆಯುತ್ತಿರುವ ಕಾರಣ ತೀವ್ರ ನಿಗಾ ವಹಿಸಿರುವ ಕೊಡಗು ಪೊಲೀಸರು ಚೆಕ್‍ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.