×
Ad

ರಾಜ್ಯ ಮಟ್ಟದಲ್ಲಿ ಬೃಹತ್ ದೊಂಬರ ಸಮಾವೇಶ ನಡೆಸಿ : ಸಂಸದ ಕೆ.ಎಚ್.ಮುನಿಯಪ್ಪ

Update: 2017-11-05 22:00 IST

ಕೋಲಾರ,ನ.5: ಮತ ಚಲಾಯಿಸುವ ಹಕ್ಕಿಗೆ ತಕ್ಕ ಪ್ರತಿಫಲವಾಗಿ ಆಯಾ ಸಮುದಾಯದಿಂದ ಜನಪ್ರತಿನಿಧಿಗಳಾಗಬೇಕು. ದೊಡ್ಡ ಸಮುದಾಯಗಳ ನಡುವೆ ದೊಂಬರ ಸಮುದಾಯ ಕಣ್ಣಿಗೆ ಕಾಣುವಂತಾಗಬೇಕಾದರೆ ರಾಜ್ಯ ಮಟ್ಟದಲ್ಲಿ ಬೃಹತ್ ಸಮಾವೇಶ ನಡೆಸಿ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

ಇಲ್ಲಿನ ಟಿ. ಚನ್ನಯ್ಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ದೊಂಬರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಣ್ಣಸಣ್ಣ ಸಮಾಜದವರನ್ನು ಗುರುತಿಸುವ ಸಲುವಾಗಿ ಜಾತಿ ಜನಗಣತಿ ಮಾಡಿಸಿದ್ದಾರೆ. ಸರ್ಕಾರಗಳು ಜಾತಿ ಆಧಾರದಲ್ಲಿ ಸೌಲಭ್ಯಗಳನ್ನು ಒದಗಿಸುವುದರಿಂದ ಜಾತಿಯ ಹೆಸರು ಹೇಳದಿದ್ದರೆ ಸೌಲತ್ತು ಸಿಗುವುದಿಲ್ಲ ಎಂದರು.

ರಾಜ್ಯದಲ್ಲಿ ಎಸ್ಸಿಎಸ್ಟಿ ಸಮುದಾಯ ಶೇ. 24.1ರಷ್ಟಿದೆ. ಇದರಲ್ಲಿ ಎಸ್ಟಿ ಸುಮಾರು ಶೇ. 7ರಷ್ಟಿದೆ. ಎಸ್ಸಿ ಸಮುದಾಯದಲ್ಲಿ ಎಡ,ಬಲ, ಭೋವಿ,ಲಂಬಾಣಿ ಹೆಚ್ಚಿನ ಜನಸಂಖ್ಯೆಯಿದೆ. ಇವುಗಳ ನಡುವೆ ಸಣ್ಣ ಸಮುದಾಯವಾದ ದೊಂಬರ ಸಮಾಜ ಕಣ್ಣಿಗೆ ಕಾಣುವಂತಾಗಬೇಕು.ರಾಜಕೀಯವಾಗಿ ಮುಂದೆ ಬರಬೇಕಾದರೆ ಸಂಘಟನೆ ಬಹುಮುಖ್ಯ. ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ, ನಿಮ್ಮ ಬೇಡಿಕೆಗಳನ್ನು ಮುಂದಿಡಿ, ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷರನ್ನು ನಾನೇ ಕರೆದುಕೊಂಡು ಬರುತ್ತೇನೆ ಎಂದು ಭರವಸೆ ನೀಡಿದರು.

ಪಕ್ಷ ಯಾವುದೇ ಇರಲಿ, ಎಲ್ಲ ಸಮಾಜದವರೂ ಮತ ಚಲಾಯಿಸುತ್ತಾರೆ. ಮತಕ್ಕೆ ತಕ್ಕ ಪ್ರತಿಫಲ ಸಿಗಬೇಕಾದರೆ ಆಯಾ ಸಮಾಜದಿಂದ ಗ್ರಾಪಂನಿಂದ ಹಿಡಿದು ಜಿಪಂ, ಸ್ಥಳೀಯ ಸಂಸ್ಥೆಗಳ ಹಂತದಲ್ಲಾದರೂ ಜನಪ್ರತಿನಿಧಿಗಳಾಗಬೇಕು. ಇದುವರೆಗೆ ಸಾಧ್ಯವಾಗದಿದ್ದರೆ ಇನ್ನು ಮುಂದಾದರೂ ಗುರುತಿಸಿಕೊಳ್ಳುವ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದ ಅವರು, ಶೈಕ್ಷಣಿಕವಾಗಿ ಮುಂದುವರಿದು ಕಾನೂನು ಬದ್ಧವಾದ ಸೌಲಭ್ಯ ಪಡೆದುಕೊಂಡು ಐಎಎಸ್ ನಂತರ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾದರೆ ಮಹಾತ್ಮಗಾಂಧೀಜಿ  ಸಮಾನತೆಯ ಕನಸು ನನಸಾಗುವ ಜತೆಗೆ ಡಾ.ಬಿ.ಆರ್. ಅಂಬೇಡ್ಕರ್ ರೂಪಿಸಿದ ಸಂವಿಧಾನ ಸದುಪಯೋಗವಾದಂತಾಗುತ್ತದೆ ಎಂದರು.

ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ,ಯಾವುದೇ ಒಂದು ಸಮುದಾಯ, ಜಾತಿಯ ಕುರಿತು ಹಗುರವಾಗಿ ಮಾತನಾಡುವುದು ನಾಗರೀಕ ಸಮಾಜದ ಲಕ್ಷಣವಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಸುತ್ತೋಲೆಯನ್ನೂ ಹೊರಡಿಸಿದೆ. ಮೀಸಲಾತಿಯ ಹೆಸರಿನಲ್ಲಿ ಸಮಾಜ ಛಿದ್ರ ಛಿದ್ರವಾಗುವುದಾದರೆ ಆಗ ಮೀಸಲಾತಿಗೆ ಅರ್ಥ ಬರುವುದಿಲ್ಲ. ಒಗ್ಗೂಡಿ ಅವಕಾಶಗಳನ್ನು ಪಡೆದುಕೊಳ್ಳಬೇಕು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಪರಿಶಿಷ್ಟ ಜಾತಿ ಆಯೋಗ ಗಮನಹರಿಸಬೇಕು ಎಂದು ನುಡಿದರು.

ಎಸ್ಸಿ ಸಮುದಾಯದಲ್ಲಿರುವ 101 ಜಾತಿಗಳಲ್ಲಿ ಕೆಲ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ಅಧಿಕಾರಿಗಳಲ್ಲೂ ಗೊಂದಲಗಳಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೂ ಕಾರ್ಯಾಗಾರ ನಡೆಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ದೊಂಬರ ಸಂಘದ ಅಧ್ಯಕ್ಷ ಡಿ.ಆರ್. ಚಿನ್ನ, ರಾಜ್ಯದಲ್ಲಿ ದೊಂಬರ ಸಮುದಾಯ ಸುಮಾರು 5 ಲಕ್ಷ ಜನಸಂಖ್ಯೆಯಿದೆ. ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ರಾಜಕೀಯ ಪ್ರಾತಿನಿಧ್ಯವೂ ಸಿಕ್ಕಿಲ್ಲ. ಸಮುದಾಯದ ಹಲವು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟುನಲ್ಲಿ ಮುಂಬರುವ ಜನವರಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ದೊಂಬರ ಸಂಘದ ಗೌರವಾಧ್ಯಕ್ಷರೂ ಆದ ತುಮಕೂರು ನಗರಸಭೆ ಮಾಜಿ ಅಧ್ಯಕ್ಷ ರೆಡ್ಡಿಚಿನ್ನಯಲ್ಲಪ್ಪ, ಕೋಚೀಮುಲ್ ನಿರ್ದೇಶಕ ಕೆ.ವೈ. ನಂಜೇಗೌಡ, ಜಿಲ್ಲಾ ಸಂಘದ ಅಧ್ಯಕ್ಷ ಆರ್. ಸತೀಶ್, ಜಿಲ್ಲಾ ಉಪಾಧ್ಯಕ್ಷ ವೆಂಕಟರಮಣಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿ. ರಾಜಪ್ಪ, ಸಮುದಾಯದ ಮುಖಂಡರಾದ ಡಾ.ಡಿ.ವಿ.ಶ್ರೀನಿವಾಸ್, ಬೆಂಗಳೂರಿನ ಜೆ.ಪಿ. ನಗರದ ಸಂಘಟನಾ ಕಾರ್ಯದರ್ಶಿ ರಘು, ಮುನಿರಾಜು, ಮಾಲೂರಿನ ಸರ್ಕಾರಿ ಪಿಯು ಕಾಲೇಜಿನ  ಉಪನ್ಯಾಸಕ ಎಸ್. ನಾಗರಾಜು ಇತರರು ಹಾಜರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News