×
Ad

ಶ್ರೀರಂಗಪಟ್ಟಣಕ್ಕೆ ಜೆಡಿಎಸ್ ಅಭ್ಯರ್ಥಿ ರವೀಂದ್ರ:ಕುಮಾರಸ್ವಾಮಿ ಘೋಷಣೆ

Update: 2017-11-05 22:09 IST

ಮಂಡ್ಯ, ನ.5: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ರವೀಂದ್ರ ಶ್ರೀಕಂಠಯ್ಯ ಅವರ ಹೆಸರನ್ನು ಘೋಷಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಕ್ಷದ ವಿರುದ್ಧ ಬಂಡಾಯ ಸಾರಿರುವ ಜಿಲ್ಲೆಯ ಇಬ್ಬರು ಶಾಸಕರ ವಿರುದ್ಧ ರಾಜಕೀಯ ಅಖಾಡಕ್ಕೆ ಸಿದ್ಧತೆಗೆ ಚಾಲನೆ ನೀಡಿದ್ದಾರೆ.

ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಪ್ರಥಮ ಬಾರಿಗೆ ರವಿವಾರ ಸಾರ್ವಜನಿಕವಾಗಿ ಕಾಣಿಸಿಕೊಂಡ ಕುಮಾರಸ್ವಾಮಿ, ಬಂಡಾಯ ಸಾರಿರುವ ಶಾಸಕರಿಗೆ ನಾವು  ಕಣಕ್ಕಿಳಿಸುವ ಅಭ್ಯರ್ಥಿಗಳೇ ಉತ್ತರವಾಗಲಿದ್ದಾರೆ. ಪಕ್ಷಕ್ಕೆ ವಿಶ್ವಾಸದ್ರೋಹ ಎಸಗಿರುವವರ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಗೆದ್ದೇಗೆಲ್ಲುವ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.

ರವೀಂದ್ರ ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯ ಅವರ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ಮಧ್ಯಾಹ್ನ ಇತ್ತಾದರೂ ಕುಮಾರಸ್ವಾಮಿ ಅವರು ಸಂಜೆ ಆಗಮಿಸಿದರು. ತೂಬಿನಕೆರೆ ಹೆಲಿಪ್ಯಾಡ್‍ನಿಂದ ರಸ್ತೆ ಮೂಲಕ ಅರಕೆರೆಗೆ ತೆರಳಿದ ಅವರನ್ನು ಮಾರ್ಗದುದ್ದಕ್ಕೂ ಹಳ್ಳಿಗಳಲ್ಲಿ ಕಾರ್ಯಕರ್ತರು ಸ್ವಾಗತಿಸಿದರು. ಇದರಿಂದ ನಿಗದಿತ ಭೇಟಿ ಬಹಳ ವಿಳಂಬಗೊಂಡು ಕತ್ತಲು ಕವಿಯಿತು. ಆದರೂ, ಅರಕೆರೆಯಲ್ಲಿ ಜಮಾಯಿಸಿದ್ದ ಜನಸಾಗರ ಕಡಿಮೆಯಾಗಲಿಲ್ಲ. ಕತ್ತಲಾದರೂ ಕಾಯುತ್ತಿದ್ದ ಜನರು, ರವೀಂದ್ರ ಶ್ರೀಕಂಠಯ್ಯ ಮನೆಗೆ ತೆರಳುವ ಮಾರ್ಗದಲ್ಲಿ ಕುಮಾರಸ್ವಾಮಿ ಅವರಿಗೆ ಪುಷ್ಟವೃಷ್ಟಿ ಹರಿಸಿ ಸಂಭ್ರಮಿಸಿದರು.

ಜನಜಂಗುಳಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು ಲಘು ಲಾಠಿ ಪ್ರಹಾರವನ್ನೂ ನಡೆಸಿದರು. ಪೊಲೀಸರು, ಕಾರ್ಯಕರ್ತರ ತಳ್ಳಾಟದಲ್ಲಿ ಮಾಜಿ ಶಾಸಕ ಎಂ.ಶ್ರೀನಿವಾಸ್, ಎಎಸ್‍ಐ ಅಣ್ಣೇಗೌಡ ಕುಸಿದುಬಿದ್ದರು. ಕುಮಾರಸ್ವಾಮಿ ರವೀಂದ್ರ ಅವರ ಮನೆಗೆ ತೆರಳಿದ ನಂತರ ಪರಿಸ್ಥಿತಿ ತಿಳಿಯಾಯಿತು.

ಸಂಸದ ಸಿ.ಎಸ್.ಪುಟ್ಟರಾಜು, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಕ್, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಮಾಜಿ ಶಾಸಕರಾದ ಪಾರ್ವತಮ್ಮ ಶ್ರೀಕಂಠಯ್ಯ, ಪ್ರಭಾವತಿ ಜಯರಾಂ, ಎಂ.ಶ್ರೀನಿವಾಸ್, ಡಾ.ಅನ್ನದಾನಿ, ಎಂ.ಸಂತೋಷ್, ಡಿ.ರಮೇಶ್, ಮುಕುಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News